ಭರವಸೆ ನೀಡಿದ 24 ತಾಸಿನಲ್ಲೇ ಮರಾಠಾ ಪ್ರಾಧಿಕಾರ

035
Published on

ಬೀದರ್: ಮರಾಠಾ ಸಮಾಜದ ಅಭಿವೃದ್ಧಿಗಾಗಿ ಶೀಘ್ರವೇ ಪ್ರತ್ಯೇಕ ಪ್ರಾಧಿಕಾರ ರಚನೆ ಸಂಬಂಧ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆದ ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ನೀಡಿದ್ದ ಭರವಸೆ ಕೇವಲ 24 ತಾಸಿನಲ್ಲೇ ಈಡೇರಿದೆ.

ಶುಕ್ರವಾರ ಬಸವಕಲ್ಯಾಣಕ್ಕೆ ಭೇಟಿ ನೀಡಿದ್ದ ವಿಜಯೇಂದ್ರ ಅವರು ಮರಾಠಾ ಸಮಾಜದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಬೆಂಗಳೂರಿಗೆ ಹೋಗುತ್ತಲೇ ಸಿಎಂ ಯಡಿಯೂರಪ್ಪ ಅವರೊಂದಿಗೆ ಸಮಾಜದ ಬೇಡಿಕೆ ಕುರಿತು ಚರ್ಚಿಸುವೆ. ಶೀಘ್ರ ಪ್ರತ್ಯೇಕ ಪ್ರಾಧಿಕಾರ ರಚನೆಗೆ ಕೋರುವೆ. ಸಮಾಜಕ್ಕೆ 2ಎ ಪ್ರವರ್ಗಕ್ಕೆ ಸೇರಿಸುವ ಬಗ್ಗೆಯೂ ಗಮನ ಸೆಳೆಯುವೆ ಎಂದು ವಾಗ್ದಾನ ಮಾಡಿದ್ದರು. ಇದರ ಬೆನ್ನಲ್ಲೇ ಶನಿವಾರ ಸಿಎಂ ಯಡಿಯೂರಪ್ಪ ಅವರು ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಘೋಷಣೆ ಮಾಡಿ, ಇದಕ್ಕಾಗಿ 50 ಕೋಟಿ ರೂ. ಒದಗಿಸುವ ಆದೇಶ ಜಾರಿಗೊಳಿಸಿದ್ದಾರೆ.

ರಾಜ್ಯದಲ್ಲಿ ಮರಾಠಾ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇರಿ ಇತರೆ ಅಭಿವೃದ್ಧಿ ಕೆಲಸಗಳಿಗಾಗಿ ಪ್ರಾಧಿಕಾರ ಸ್ಥಾಪಿಸಲಾಗುವುದು. ಈ ಪ್ರಾಧಿಕಾರಕ್ಕೆ 50 ಕೋಟಿ ರೂ. ಅನುದಾನವನ್ನು ಆರ್ಥಿಕ ಇಲಾಖೆ ಸಹಮತಿಯೊಂದಿಗೆ ಮೀಸಲಿಡುವಂತೆ ಸಿಎಂ ಯಡಿಯೂರಪ್ಪ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಟಿಪ್ಪಣಿಯಲ್ಲಿ ಆದೇಶಿಸಿದ್ದಾರೆ. ಸರ್ಕಾರದ ಈ ಕ್ರಮ ಮರಾಠಾ ಸಮಾಜಕ್ಕೆ ದೀಪಾವಳಿ ಗಿಫ್ಟ್ ನೀಡಿದಂತಾಗಿ, ಸಂಭ್ರಮಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net