

ವಿಜಯವಾಣಿ ಸುದ್ದಿಜಾಲ ಉಡುಪಿ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ವಿದ್ಯಾರ್ಥಿಗಳಿಗಾಗಿ ಗ್ರೀನ್ಸ್ ಮಣಿಪಾಲದಲ್ಲಿ ಭಾನುವಾರ ನಸುಕಿನ 4:30ಕ್ಕೆ ಆಯೋಜಿಸಿದ್ದ 'ಮಣಿಪಾಲ ಮೆರಾಥಾನ್' ಕಾರ್ಯಕ್ರಮ ಭಾರತದ ಅತಿದೊಡ್ಡ ಓಟವಾಗಿ ದಾಖಲಾಯಿತು.
ಈ ವರ್ಷದ 7ನೇ ಆವೃತ್ತಿಯಾಗಿ ಚಲನೆಯಲ್ಲಿ ನಾವೀನ್ಯತೆ: ಆರೋಗ್ಯ ಮತ್ತು ಸದೃಢತೆಗಾಗಿ ತಂತ್ರಜ್ಞಾನ ಅಳವಡಿಸಿಕೊಳ್ಳುವಿಕೆ ಎಂಬ ಘೋಷವಾಕ್ಯದೊಂದಿಗೆ ಮೆರಾಥಾನ್ ನಡೆದಿದ್ದು, 20 ಸಾವಿರಕ್ಕೂ ಹೆಚ್ಚು ಓಟಗಾರರು ಪಾಲ್ಗೊಂಡಿದ್ದರು. 'ಮಣಿಪಾಲ್ ಗ್ಲೋಬಲ್ ವರ್ಚುಯಲ್ 5ಕೆ ರನ್' ಸೇರ್ಪಡೆಯಿಂದಾಗಿ ವಿಶ್ವಾದ್ಯಂತ 7 ಸಾವಿರಕ್ಕೂ ಅಧಿಕ ಓಟಗಾರರು ವರ್ಚುಯಲ್ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಮಾಹೆ ಟ್ರಸ್ಟ್ನ ಅಧ್ಯಕ್ಷ ಡಾ. ರಂಜನ್ ಪೈ, ಮಾಹೆಯ ಪ್ರೊ-ಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳ್, ಮಾಹೆಯ ವೈಸ್-ಚಾನ್ಸೆಲರ್ ವಿಎಸ್ಎಂ (ನಿವೃತ್ತ) ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಹಾಗೂ ವಿವಿಯ ಅಧಿಕಾರಿಗಳು, ಜಿಲ್ಲೆಯ ವಿವಿಧ ಗಣ್ಯರು ಪಾಲ್ಗೊಂಡಿದ್ದರು.
ಮಣಿಪಾಲ ಮೆರಾಥಾನ್ ಕೇವಲ ಓಟವಲ್ಲ. ಇದು ಚಲನೆಯಲ್ಲಿ ಸ್ಥಿತಿಸ್ಥಾಪಕತ್ವ, ನಾವೀನ್ಯ ಮತ್ತು ಸಮುದಾಯ ಮನೋಭಾವದ ಆಚರಣೆಯಾಗಿದೆ. ಈ ವರ್ಷದ ಘೋಷಣೆಯಂತೆ ಎಲ್ಲರ ಯೋಗಕ್ಷೇಮ ಮತ್ತು ದೈಹಿಕ ಸದೃಢತೆ ಉತ್ತೇಜಿಸಲು ಜಾಗತಿಕ ಮಟ್ಟದಲ್ಲಿ ಈ ಓಟ ಆಯೋಜಿಸಲಾಗಿದೆ. | ಡಾ. ಎಚ್. ಎಸ್. ಬಲ್ಲಾಳ್. ಮಣಿಪಾಲ ಮಾಹೆಯ ಪ್ರೊ-ಚಾನ್ಸೆಲರ್. ತಂತ್ರಜ್ಞಾನವೂ ಸಹ ನಮ್ಮ ದೈಹಿಕ ಸದೃಢತೆಯನ್ನು ಮರುರೂಪಿಸಿ ಸಾಧಿಸುವ ವಿಧಾನವಾಗಿದೆ. ಈ ಬಾರಿ 'ಮಣಿಪಾಲ ಮೆರಾಥಾನ್'ನಲ್ಲಿ ವಿಶ್ವಾದ್ಯಂತ ಓಟಗಾರರು ತೊಡಗಿಸಿಕೊಂಡಿದ್ದು ಮಹತ್ತರ ಸಾಧನೆಯಾಗಿದೆ. ಇದು ಆರೋಗ್ಯಕರ ಭವಿಷ್ಯ ಉತ್ತೇಜಿಸುವಲ್ಲಿ ಡಿಜಿಟಲ್ ರೂಪಾಂತರದ ಶಕ್ತಿಯನ್ನು ಎತ್ತಿ ತೋರಿಸುತ್ತದೆ. | (ಡಾ.) ಎಂ. ಡಿ. ವೆಂಕಟೇಶ್. ಮಣಿಪಾಲ ಮಾಹೆಯ ವೈಸ್ ಚಾನ್ಸೆಲರ್