ಆಡಳಿತ ಮಂಡಳಿಯವರೇ ಇಲ್ಲಿ ಸಾಲಗಾರರು

11 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಳ್ನಾವರ ತಾಲೂಕಿನ ಡೋರಿ ಗ್ರಾಮದ ಅರವಟಗಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಿರುದ್ಧ ಸಹಕಾರ ತತ್ವ ಉಲ್ಲಂಘಿಸಿದ ಆರೋಪ ಕೇಳಿಬಂದಿದೆ. ಸಂಘದ ನಿಯಮಾವಳಿ ಮೀರಿ ಆಡಳಿತ ಮಂಡಳಿಯ ಕೆಲವರಷ್ಟೇ ಸಾಲ ಪಡೆದಿದ್ದಾರೆ. ಈ ಕುರಿತು ಮಾಜಿ ನಿರ್ದೇಶಕರು ಮತ್ತು ಹಾಲಿ ಸದಸ್ಯರಾದ ಭರತೇಶ ಪಾಟೀಲ ಹಾಗೂ ಉಮೇಶ ಭೂಮಣ್ಣವರ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ರೈತರು ಮತ್ತು ವ್ಯಾಪಾರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಾಲದ ಮೂಲಕ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಬಸನಗೌಡ ಯ. ಪಾಟೀಲ ಅವರು 1949ರಲ್ಲಿ ಡೋರಿಯಲ್ಲಿ ಅರವಟಗಿ ಕೃಷಿ ಸಹಕಾರ ಸಂಘವನ್ನು ಸ್ಥಾಪಿಸಿದ್ದಾರೆ. ಅಳ್ನಾವರ ತಾಲೂಕು ವ್ಯಾಪ್ತಿಯ ಸಂಘದಲ್ಲಿ ಸುಮಾರು 1,400 ಸದಸ್ಯರಿದ್ದಾರೆ. ಆಡಳಿತ ಮಂಡಳಿಗೆ 2021ರ ಫೆ. 7ರಂದು ನಡೆದು 12 ಜನ ಆಯ್ಕೆಯಾಗಿದ್ದಾರೆ. ಸದ್ಯ ಶಿವಾನಂದ ಹಿರೇಮಠ ಅಧ್ಯಕ್ಷ, ಮಹ್ಮದಹನೀಫ ಪಾಟೀಲ ಉಪಾಧ್ಯಕ್ಷರಾಗಿದ್ದಾರೆ.

2022- 23ನೇ ಸಾಲಿನಲ್ಲಿ ಸಂಘದ ಆಡಳಿತ ಮಂಡಳಿಯ ಕೆಲವರು ಸುಮಾರು 16 ಲಕ್ಷ ರೂಪಾಯಿ ಕೃಷಿಯೇತರ (ಬಳಕೆ ಸಾಲ), (ಬ್ಯುಸಿನೆಸ್ ಡೆವೆಲಪ್‌ಮೆಂಟ್ ಪ್ರೊಗ್ರಾಂ- ಬಿಡಿಪಿ) ಸಾಲ ಪಡೆದಿದ್ದಾರೆ. ಇದಕ್ಕೆ ಭದ್ರತೆ ಒದಗಿಸಿಲ್ಲ, ನೋಂದಣಿ ಕಚೇರಿಯಲ್ಲಿ ಭೋಜಾ ಕೂಡ ಕೂಡಿಸಿಲ್ಲ. 2023- 24ನೇ ಸಾಲಿನಲ್ಲಿ ಆಸ್ತಿಯ ಭದ್ರತೆ ನೀಡದೆ ಸುಮಾರು 38 ಲಕ್ಷ ರೂ. ಸಾಲ ಪಡೆದಿದ್ದಾರೆ. 2024ರ ಏಪ್ರಿಲ್‌ನಿಂದ ಈವರೆಗೆ ಸುಮಾರು 40 ಲಕ್ಷ ರೂ. ಬಿಡಿಪಿ ಸಾಲ ಪಡೆದಿದ್ದಾರೆ. ಈ ರೀತಿ ಭದ್ರತೆ ಇಲ್ಲದೆ ಸಾಲ ಪಡೆದರೆ ಸಂಘ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಕೂಡಲೇ ಸಾಲ ಪಡೆದವರಿಂದ ಮರುಪಾವತಿಸಿಕೊಳ್ಳಬೇಕು ಎಂದು ಭರತೇಶ ಪಾಟೀಲ ಹಾಗೂ ಉಮೇಶ ಭೂಮಣ್ಣವರ ಒತ್ತಾಯಿಸಿದ್ದಾರೆ.

ಕಾನೂನುಬಾಹಿರ ಕಾರ್ಯ ಸಂಘದ ನಿರ್ದೇಶಕರಾಗಿದ್ದ ಅಶೋಕ ಸಾವಂತ 2023ರ ಫೆಬ್ರವರಿಯಲ್ಲಿ ನಿಧನರಾಗಿದ್ದಾರೆ. ನಿಯಮಾನುಸಾರ ಮರು ಚುನಾವಣೆ ಮಾಡದೆ ಅಶೋಕ ಅವರ ಪತ್ನಿಯನ್ನು ಕೋ ಆಪ್ ಮೂಲಕ ನಿರ್ದೇಶಕರನ್ನಾಗಿ ಮಾಡಿಕೊಂಡಿದ್ದಾರೆ. ನಿರ್ದೇಶಕರಾಗಿದ್ದ ಮಡಿವಾಳಪ್ಪ ಬೋರಿಮನಿ ನಿಧನರಾಗಿದ್ದು, ಅವರ ಸ್ಥಾನಕ್ಕೆ ಸಾಲಗಾರ ಸದಸ್ಯರಲ್ಲದ ಸುರೇಶ ಕೋಲಕಾರ ಅವರನ್ನು ಕೋ ಆಪ್ ಮೂಲಕ ನಿರ್ದೇಶಕರನ್ನಾಗಿ ಮಾಡಿಕೊಂಡಿದ್ದಾರೆ. ಎಸ್‌ಸಿ ಸಾಲಗಾರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಭೀಮಪ್ಪ ಹರಿಜನ ನಿಧನದ ನಂತರ ಅವರ ಸ್ಥಾನಕ್ಕೆ ಪತ್ನಿ ಶಾಂತವ್ವ ಅವರನ್ನು ಕಾನೂನುಬಾಹಿರವಾಗಿ ಕೋ ಆಪ್ ಮಾಡಿಕೊಂಡಿರುವ ಆರೋಪ ಆಡಳಿತ ಮಂಡಳಿ ಮೇಲಿದೆ.

ಅರವಟಗಿ ಪಿಕೆಪಿಎಸ್ ಆಡಳಿತ ಮಂಡಳಿಯ ಕೆಲವರು ನಿಯಮಾವಳಿ ಮೀರಿ, ಭದ್ರತೆ ನೀಡದೆ ಸಾಲ ಪಡೆದಿರುವ ದೂರು ಬಂದಿದೆ. ಈ ಕುರಿತು ಅಧ್ಯಕ್ಷ, ಕಾರ್ಯದರ್ಶಿಗೆ ನೋಟಿಸ್ ಕಳಿಸಲಾಗಿದೆ. 15 ದಿನಗಳೊಳಗೆ ಸಮರ್ಪಕ ಉತ್ತರ ನೀಡದಿದ್ದರೆ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗುವುದು. - ರಮೇಶ ಬಗಲಿ, ಸಹಕಾರ ಸಂಘಗಳ ಉಪ ನಿಬಂಧಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net