

ಬೆಳಗಾವಿ: ಬೇರೆ ಬೇರೆ ಮೊಬೈಲ್ ನಂಬರ್‌ಗಳಿಂದ ಕರೆ ಮಾಡಿ ನಾನು ಗೋಕಾಕ ಶಾಸಕ, ನಾನು ಹೇಳಿದ ಕೆಲಸ ಮಾಡದಿದ್ದರೆ ವರ್ಗಾವಣೆ ಮಾಡುತ್ತೇನೆ ಎಂದು ಪೊಲೀಸರಿಗೆ ಬ್ಲಾೃಕ್‌ಮೇಲ್ ಮಾಡುತ್ತಿದ್ದ ಆರೋಪಿನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಮೂಡಲಗಿ ತಾಲೂಕಿನ ಅರಬಾವಿಯ ಸುನೀಲ ದಾಸರ ಬಂಧಿತ. ಈತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೂ ಕರೆ ಮಾಡಿ ಭಯ ಹುಟ್ಟಿಸಿದ್ದ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಸಚಿವ ಸತೀಶ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ ಹೆಸರಲ್ಲಿ ಪೊಲೀಸರಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಆರೋಪಿ ಸುನೀಲ ದಾಸರ 2019ರಲ್ಲಿ ನಡೆದ ಲೋಕಸಭೆಯ ಸ್ವತಂತ್ರ ಅಭ್ಯರ್ಥಿಯೂ ಆಗಿದ್ದ. ಸಂಬಂಧಿಕರಿಂದ ಹಣ ಪಡೆದು ವಾಪಸ್ ನೀಡದ ಆರೋಪಿಯ ತಾಯಿಯನ್ನು ಗೋಕಾಕ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವಿಷಯವಾಗಿ ಆರೋಪಿ ಸುನೀಲ, ‘ನನ್ನ ತಾಯಿಗೆ ತೊಂದರೆ ಕೊಡುತ್ತಿದ್ದೀರಿ ಎಂದು ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ, ಐಜಿಪಿ ವಿಕಾಶಕುಮಾರ್ ವಿಕಾಸ ಅವರಿಗೆ ಕರೆ ಮಾಡಿ ‘ನನಗೆ ಸಿಎಂ ಗೊತ್ತು, ಸಿಎಂ ನನಗೆ ಖಾಸಾ ಖಾಸಾ. ನಿಮ್ಮನ್ನ ಎತ್ತಂಗಡಿ ಮಾಡಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನು ಗೋಕಾಕ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಗೋಕಾಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.