ಮಹಿಳೆ ಕೊಂದು ತಲೆಮರೆಸಿಕೊಂಡಿದ್ದವನ ಸೆರೆ

crime
Published on

ಆಟೋದಲ್ಲಿ ಕರೆದೊಯ್ದು ಸಾಯಿಸಿದ ಬಳಿಕ ಅತ್ಯಾಚಾರ ಎಸಗಿದ್ದ ದುರುಳ - ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಕಾರ್ಯಾಚರಣೆ ಪೊಲೀಸರು

ಕೋಲಾರ: ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪ್ರಕರಣವನ್ನು ಭೇದಿಸಿರುವ ಮುಳಬಾಗಿಲು ಪೊಲೀಸರು,
ಕೊಲೆ ಆರೋಪದಲ್ಲಿ ನಗರದ ಹೈದರಿ ನಗರದ ಆಟೋ ಚಾಲಕ ಸೈಯದ್​ ಸುಹೇಲ್​ ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನೆಯ ಹಿನ್ನೆಲೆ: ಸೆ.25ರಂದು ಮುಳಬಾಗಿಲು ಬಳಿಯ ರಾಷ್ಟ್ರೀಯ ಹೆದ್ದಾರಿ&75ರ ಸೊಣ್ಣವಾಡಿ ಮೇಲ್ಸೇತುವೆಯಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಮೃತರನ್ನು ಸುಶೀಲಮ್ಮ (42) ಎಂದು ಗುರುತಿಸಿ, ಪತಿ ಮೈಕ್​ ಶಂಕರಪ್ಪ ಮುಳಬಾಗಿಲು ನಗರ ಠಾಣೆಯಲ್ಲಿ ದೂರು ನೀಡಿದ್ದರು.


ಸುಶೀಲಮ್ಮಗೆ ಮಾನಸಿಕ ಆರೋಗ್ಯ ಸರಿ ಇಲ್ಲದ ಕಾರಣ ಮುಳಬಾಗಿಲು, ನಿಮ್ಹಾನ್ಸ್​ ಹಾಗೂ ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ವಾಸಿಯಾಗಿರಲಿಲ್ಲ. ಆಕೆ ಇದ್ದಕ್ಕಿದ್ದಂತೆ ಎಲ್ಲೆಂದರಲ್ಲಿ ಹೊರಟು ಹೋಗುತ್ತಿದ್ದಳು. ಸೆ.24ರಂದು ಸಂಜೆ 7 ಗಂಟೆಗೆ ಮನೆಯಲ್ಲಿ ಊಟ ಮಾಡಿ ಹೊರ ಹೋದವರು ವಾಪಸ್​ ಬಂದಿರಲಿಲ್ಲ. ಹುಡುಕಾಟ ನಡೆಸಿದಾಗ ಸೆ.25ರಂದು ಹೈದರಿ ನಗರದ ಮೊಬಿನ್​ರವರ ಜಮೀನಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಸಾವಿನ ಬಗ್ಗೆ ಅನುಮಾನವಿದೆ ಎಂದು ದೂರಿನಲ್ಲಿ ವಿವರಿಸಿದ್ದರು.


ಪ್ರಕರಣದ ತನಿಖೆ ಕೈಗೊಂಡಿದ್ದ ಮುಳಬಾಗಿಲು ನಗರಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇನ್​ಸ್ಪೆಕ್ಟರ್​ ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮೃತದೇಹವನ್ನು ಕೋಲಾರದ ಎಸ್​ಎನ್​ಆರ್​ ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು.
ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಸೆ.25ರಂದು ರಾತ್ರಿ 1.15ರ ಸುಮಾರಿನಲ್ಲಿ ಎಪಿಎಂಸಿ ಮಾರುಕಟ್ಟೆ ಬಳಿ ಆಟೋದಲ್ಲಿ ಮಹಿಳೆಯನ್ನು ಹತ್ತಿಸಿಕೊಂಡು ಹೋಗುತ್ತಿರುವುದು ಪತ್ತೆಯಾಗಿತ್ತು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮಹಿಳೆಯನ್ನು ಕಲ್ಲಿನಿಂದ ಹೊಡೆದು ಕೊಂದು, ಆಟೊದಲ್ಲೇ ಆಕೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.


ಕಾರ್ಯಾಚರಣೆಗೆ ಎಸ್​ಪಿ ಬಿ.ನಿಖಿಲ್​ ಮುಂದಾಳತ್ವದಲ್ಲಿ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿಗಳಾದ ರವಿಶಂಕರ್​, ಜಗದೀಶ್​ ಮಾರ್ಗದರ್ಶನದಲ್ಲಿ ಡಿವೈಎಸ್​ಪಿ ಡಿ.ನಂದಕುಮಾರ್​ ನೇತೃತ್ವದಲ್ಲಿ ಮುಳಬಾಗಿಲು ನಗರ ಠಾಣೆ ಪೊಲೀಸ್​ ಇನ್​ಸ್ಪೆಕ್ಟರ್​ ಎನ್​.ರಾಜಣ್ಣ, ಕಾನ್​ಸ್ಟೇಬಲ್​ ಚಲಪತಿ, ಮಧು, ರವಿನಾಯಕ್​, ರಾಮಾಂಜಿ ತಂಡ ರಚಿಸಲಾಗಿತ್ತು. ಯಶಸ್ವಿಯಾಗಿ ಪ್ರಕರಣ ಬೇಧಿಸಿದ ತಂಡಕ್ಕೆ ಎಸ್​ಪಿ ನಿಖಿಲ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net