

ಹನೂರು : ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜೀಪುರ ಗ್ರಾಮದ ಅರಣ್ಯದಂಚಿನ ಜಮೀನೊಂದರ ಮನೆಯಲ್ಲಿ ಗುರುವಾರ ಸಂಜೆ ಅಕ್ರಮವಾಗಿ ನಾಡ ಬಂದೂಕನ್ನು ಹೊಂದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಜ್ಜೀಪುರ ಗ್ರಾಮದ ಗೋವಿಂದರಾಜು (50) ಬಂಧಿತ ಆರೋಪಿ. ಈತ ಗ್ರಾಮದ ಹೊರವಲಯದಲ್ಲಿನ ಮೂಡಲಕಾಡು ಅರಣ್ಯ ಪ್ರದೆಶದ ಅಂಚಿನಲ್ಲಿ ಪುಟ್ಟಸ್ವಾಮಯ್ಯ ಎಂಬುವರ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದು, ಇಲ್ಲಿನ ಮನೆಯಲ್ಲೇ ವಾಸವಿದ್ದರು. ಆದರೆ ಸರ್ಕಾರದ ಪರವಾನಿಗೆ ಇಲ್ಲದೇ ಅಕ್ರಮವಾಗಿ ನಾಡ ಬಂದೂಕನ್ನು ಹೊಂದಿದ್ದರು ಎನ್ನಲಾಗಿದೆ.
ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಲೋಕೇಶ್ ಹಾಗೂ ಸಿಬ್ಬಂದಿ ತಂಡ ಸಂಜೆ 4.30 ರಲ್ಲಿ ಜಮೀನಿನ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ನಾಡ ಬಂದೂಕನ್ನು ಹೊಂದಿರುವುದು ದೃಢಪಟ್ಟಿದೆ. ಬಳಿಕ ನಾಡ ಬಂದೂಕು, ಮಚ್ಚು, ಚೂರಿಗಳನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.