

ಜಮಖಂಡಿ: ಸಮೀಪದ ಹಳಿಂಗಳಿ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಲು ಹೊಂಚುಹಾಕಿದ್ದ ಗ್ರಾಮದ ಲಾಲಸಾಬ ಗುಡ್ಡದಮನಿ(30) ಎಂಬವನನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಲೆ ಹಾಗೂ ಪ್ರಾಣಿಗಳನ್ನು ಹೆದರಿಸುವ ವಸ್ತುಗಳೊಂದಿಗೆ ಹಳಿಂಗಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸುತ್ತಾಡುತ್ತಿದ್ದ. ಈ ವೇಳೆ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಆತನನ್ನು ವಿಚಾರಿಸಿದಾಗ ಸಿಕ್ಕುಬಿದ್ದಿದ್ದಾನೆ. ಆರೋಪಿಯಿಂದ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಕಳೆದ ಸಾರಿ ಜಿಂಕೆ ಚರ್ಮ ಸಾಗಿಸುವ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳಿಂದ ತಪ್ಪಿಸಿಕೊಂಡು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ ಎನ್ನಲಾಗಿದೆ. ಆದರೆ, ಈ ಸಾರಿ ಮತ್ತೆ ಬೇಟೆಯಾಡಲು ಮುಂದಾಗಿದ್ದನಲ್ಲದೆ, ಆತನ ಮೊಬೈಲ್‌ನಲ್ಲಿ ಮೊಲ, ಊಡಾ ಪ್ರಾಣಿಗಳ ಬೇಟೆಯಾಡಿರುವ ಫೋಟೋಗಳು ಪತ್ತೆಯಾಗಿವೆ ಎಂದು ಅರಣ್ಯಾಧಿಕಾರಿಗಳು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ನಗರದ ಉಪವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಯ ವೈದ್ಯಕೀಯ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಎಸಿಎ್ ಅಮೃತ ಗಂಡೋಸಿ, ಡಿಎ್ಓ ಸಿ.ಜಿ. ಮಿರ್ಜಿ ಅವರ ಮಾರ್ಗದರ್ಶನದಲ್ಲಿ ಆರ್‌ಎ್ಒ ಕಿರಣ ದಾಸರಡ್ಡಿ, ಮಲ್ಲು ನಾವಿ, ಲಕ್ಷ್ಮಣ ಪಾಟೀಲ ಮತ್ತಿತರರು ತನಿಖೆಯಲ್ಲಿ ಪಾಲ್ಗೊಂಡಿದ್ದರು.
ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಯ ಆರೋಗ್ಯ ತಪಾಸಣೆ ನಡೆಸಿ ಅರಣ್ಯಾಧಿಕಾರಿಗಳು ತಮ್ಮ ವಾಹನದಲ್ಲಿ ಕರೆತರುವ ಸಂದರ್ಭ ಆಸ್ಪತ್ರೆ ಆವರಣದಲ್ಲಿನ ಚಹಾ ಅಂಗಡಿಯಿಂದ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಆರೋಪಿ ಸೇರಿ ಸಿಬ್ಬಂದಿಗೆ ಚಹಾ ತಂದು ಕೊಟ್ಟ ಘಟನೆಯೂ ನಡೆಯಿತು.