

ಸೋಮವಾರಪೇಟೆ: ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರಪೇಟೆ -ತೊಳೂರುಶೆಟ್ಟಳ್ಳಿ ಕೂತಿ ಮಾರ್ಗದ ಮುಖ್ಯ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಬೈಂದೂರು, ಮಾಗಡಿ ರಾಜ್ಯಹೆದ್ದಾರಿಯ ರಸ್ತೆ ಕಾಮಗಾರಿ ಕೂಡುರಸ್ತೆಯಿಂದ ಕೂತಿವರಗೆ ನಡೆಯುತ್ತಿದ್ದು, ರಸ್ತೆ ವಿಸ್ತರಣೆ ಸಂದರ್ಭ ಚರಂಡಿಗಳು ಮುಚ್ಚಿದ್ದು ಮಳೆಯ ನೀರು ರಸ್ತೆಯಲ್ಲಿ ಹರಿಯಲಾರಂಭಿಸಿದೆ. ಕೆಲವು ಸ್ಥಳದಲ್ಲಿ ರಸ್ತೆ ಸಂಪೂರ್ಣ ಜಲಾವೃತವಾಗಿರುವುದರಿಂದ ವಾಹನ ಸವಾರರು ಭಯಪಡುವಂತಾಗಿದೆ.
ಅಲೇಕಟ್ಟೆ, ಕಲ್ಕಂದೂರು ಗ್ರಾಮದ ಮಾರ್ಗವಾಗಿ ಕೂತಿ ಗ್ರಾಮದವರೆಗೆ ಒಟ್ಟು 13 ಕಿ.ಮೀ.ರಸ್ತೆ ಕಾಮಗಾರಿಗೆ 30 ಕೋಟಿ ರೂ.ಗಳ ಅನುದಾನವನ್ನು ಸರ್ಕಾರ ಲೋಕೋಪಯೋಗಿ ಇಲಾಖೆ ಬಿಡುಗಡೆ ಮಾಡಿತ್ತು. ಕಳೆದ 4 ತಿಂಗಳ ಹಿಂದೆಯೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಡಾ.ಮಂತರ್‌ಗೌಡ ಭೂಮಿಪೂಜೆ ನೆರವೇರಿಸಿದ್ದರು. ಆದರೆ ಕಾಮಗಾರಿ ವಿಳಂಬವಾಗಿ, ಆಮೆ ವೇಗದಲ್ಲಿ ಪ್ರಾರಂಭವಾಗಿತ್ತು. ಬೆರಳಣಿಕೆಯ ಕಾರ್ಮಿಕರು ಕಾಮಗಾರಿ ಕೆಲಸದಲ್ಲಿ ತೊಡಗಿದ್ದರು. ಗ್ರಾಮಸ್ಥರು ಪ್ರತಿಭಟನೆ ಮಾಡಿ, ಮಳೆಗಾಲದೊಳಗೆ ರಸ್ತೆ ಕಾಮಗಾರಿ ಮುಗಿಸುವಂತೆ ಒತ್ತಾಯಿಸಿದ್ದರು.
ಆದರೂ ಕಾಮಗಾರಿ ಚುರುಕುಗೊಳಿಸಲಿಲ್ಲ. ಈಗ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು ಜಲಾವೃತಗೊಂಡಿವೆ. ಹೊಸಬಿಡು, ಕೂಡುರಸ್ತೆ, ತೊಳೂರುಶೆಟ್ಟಳ್ಳಿಯಲ್ಲಿ ರಸ್ತೆಯ ಮೇಲೆ ನೀರು ನಿಂತಿದೆ.
ಮೇ 29ರಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಲಿದ್ದು, ಶಾಲಾ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಇನ್ನಾದರೂ ಲೋಕೋಪಯೋಗಿ ಇಲಾಖೆ ಎಚ್ಚೆತ್ತಕೊಂಡು, ವಾಹನ ಸಂಚಾರಕ್ಕೆ ರಸ್ತೆಯನ್ನು ಸರಿಪಡಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸ್ಥಳ ಪರಿಶೀಲನೆ ಮಾಡಿ, ರಸ್ತೆ ಸರಿಪಡಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಇಇ ವೆಂಕಟೇಶ್ ನಾಯಕ್ ತಿಳಿಸಿದ್ದಾರೆ.