ಮಕ್ಕಳ ಕಲಿಕಾ ಜ್ಞಾನ ವೃದ್ಧಿಸುವುದು ಮುಖ್ಯ ಉದ್ದೇಶ: ಪ್ರಕಾಶ್ ಜೋಯ್ಸ್

Navodaya School
ಹೊಸನಗರ ತಾಲೂಕಿನ ಹುಂಚದಲ್ಲಿ ನವೋದಯ ಮತ್ತು ಮೊರಾರ್ಜಿ ಶಾಲೆಗಳ ಪ್ರವೇಶಕ್ಕೆ ಉಚಿತ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು. ಪ್ರಕಾಶ್ ಜೋಯ್ಸ್, ಅಭಿಷೇಕ್, ಸಂಜಯ್, ನಾಗೇಶ್ ನಾಯ್ಕ್, ವಿನಯ್ ಮತ್ತಿತರರಿದ್ದರು.
Published on

ಶಿವಮೊಗ್ಗ: ನವೋದಯ ಮತ್ತು ಮೊರಾರ್ಜಿ ವಸತಿ ಶಾಲೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅತ್ಯುತ್ತಮ ಶಿಕ್ಷಣ ಯೋಜನೆಗಳಾಗಿದ್ದು ಅವುಗಳ ಮೂಲಕ ಮಕ್ಕಳ ಕಲಿಕಾ ಜ್ಞಾನವನ್ನು ವೃದ್ಧಿಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಜ್ಞಾನ, ಸಲಹೆ, ಸೂಚನೆ ನೀಡಲಾಗುತ್ತಿದೆ ಎಂದು ನವೋದಯ ಮತ್ತು ಮೊರಾರ್ಜಿ ಶಿಬಿರದ ಸಂಸ್ಥಾಪಕ ಪ್ರಕಾಶ್ ಜೋಯ್ಸ್ ಹೇಳಿದರು.

ಹೊಸನಗರ ತಾಲೂಕಿನ ಹುಂಚದಲ್ಲಿ ಭಾನುವಾರ ನಾಲ್ಕನೇ ವರ್ಷದ ನವೋದಯ ಮತ್ತು ಮೊರಾರ್ಜಿ ಶಾಲೆಗಳ ಪ್ರವೇಶದ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, 2021ರಲ್ಲಿ ಉಚಿತ ತರಬೇತಿ ಶಿಬಿರ ಶುರುವಾಗಿದ್ದು, ಮಲೆನಾಡಿನ ವಿದ್ಯಾರ್ಥಿಗಳಿಗೆ ಈ ಎರಡೂ ಶಾಲೆಗಳ ಪರಿಚಯ, ಆಯ್ಕೆ ಪ್ರಕ್ರಿಯೆ ಮಾಹಿತಿ, ಕೋಚಿಂಗ್, ಮಾದರಿ ಪರೀಕ್ಷೆ, ಕಲಿಕಾ ಸಾಮಗ್ರಿಗಳು, ಸಮಯ ನಿರ್ವಹಣೆ ಮತ್ತು ಇತರೆ ಉಪಯುಕ್ತ ಮಾಹಿತಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಕಳೆದ ಮೂರು ವರ್ಷದಲ್ಲಿ 20ಕ್ಕೂ ಅಧಿಕ ವಿವಿಧ ಶಾಲೆಗಳಿಂದ 209 ಮಕ್ಕಳು ಭಾಗವಹಿಸಿದ್ದು, 6 ಮಕ್ಕಳು ನವೋದಯ ಶಾಲೆಗೆ ಮತ್ತು 42 ಮಕ್ಕಳು ಮೊರಾರ್ಜಿ ಶಾಲೆಗೆ ತೇರ್ಗಡೆ ಆಗಿದ್ದಾರೆ. ಶಿಬಿರದಿಂದ 48 ಮಕ್ಕಳು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 1.68 ಕೋಟಿ ರೂ. ಮೌಲ್ಯದ ಶೈಕ್ಷಣಿಕ ಉಪಯೋಗ ಪಡೆದುಕೊಂಡಿದ್ದಾರೆ. ಪ್ರಸಕ್ತ ಸಾಲಿನ ಶಿಬಿರಕ್ಕೆ ಹುಂಚ ಸುತ್ತಮುತ್ತಲಿನ 22ಕ್ಕೂ ಹೆಚ್ಚು ಶಾಲೆಗಳಿಂದ 72 ಮಕ್ಕಳು ಶಿಬಿರಕ್ಕೆ ಹೆಸರು ನೋಂದಾಯಿಸಿದ್ದಾರೆ. ಸತತ ನಾಲ್ಕು ತಿಂಗಳು, ಪ್ರತಿ ಭಾನುವಾರ ಮಕ್ಕಳಿಗೆ ಪ್ರವೇಶ ಪರೀಕ್ಷೆಗೆ ಉತ್ತಮ ತರಬೇತಿ ನೀಡಲಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯ ಶಿಕ್ಷಕ ಮಂಜಪ್ಪ ಗುಳುಕೊಪ್ಪ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದ್ದು, 5ನೇ ತರಗತಿಯಲ್ಲೇ ಇದನ್ನು ಎದುರಿಸಲು ಹಳೆ ನವೋದಯ ವಿದ್ಯಾರ್ಥಿ ಬಳಗ ಮತ್ತು ಹುಂಚ ಯುವ ತಂಡ ಉತ್ತಮ ವೇದಿಕೆ ಕಲ್ಪಿಸಿದೆ ಎಂದು ಶ್ಲಾಘಿಸಿದರು.
ಶಿಬಿರದ ಮೂಲಕ ಸಾಧನೆ ಮಾಡಿದ ಮಕ್ಕಳು ಮತ್ತು ಪಾಲಕರು ಅನಿಸಿಕೆ ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಉಚಿತವಾಗಿ ಟೀಶರ್ಟ್, ನೋಟ್‌ಬುಕ್, ಪೆನ್, ಹಣ ಉಳಿತಾಯ ಹುಂಡಿ ಮತ್ತು ಅಧ್ಯಯನ ಸಾಮಗ್ರಿಗಳನ್ನು ಒಳಗೊಂಡ ಸ್ವಾಗತ ಕಿಟ್ ಅನ್ನು ಒದಗಿಸಲಾಯಿತು. ದ್ವಿತೀಯ ವರ್ಷದ ಶಿಬಿರದಲ್ಲಿ ಭಾಗಿಯಾದ ಎಲ್ಲ ಮಕ್ಕಳಿಗೆ ಅಭಿನಂದನಾ ಪತ್ರ ಮತ್ತು ಪರಿಸರ ಜಾಗೃತಿಗೆ ಸಸಿ ವಿತರಿಸಲಾಯಿತು. ಹುಂಚ ಜೈನ ಮಠದ ಕಾರ್ಯ ನಿರ್ವಾಹಕ ಪ್ರಕಾಶ್ ಮಗದಂ, ಗ್ರಾಮದ ಮುಖಂಡ ಗೋಪಾಲರಾವ್ ಉಪಸ್ಥಿತರಿದ್ದರು.

ಹಳೇ ವಿದ್ಯಾರ್ಥಿಗಳಿಗೆ ಸನ್ಮಾನ
ಶಿಬಿರದ ಸಂಚಾಲಕರಾದ ಪ್ರಕಾಶ್ ಜೋಯ್ಸ್, ಅಭಿಷೇಕ್, ಸಂಜಯ್, ನಾಗೇಶ್ ನಾಯ್ಕ್, ವಿನಯ್, ಶ್ರೀಕಾಂತ್, ಲಕ್ಷಣ್, ಶಿಕ್ಷಕರಾದ ಸಂತೋಷ್, ನವೀನ್, ಪ್ರಶಾಂತ್, ಆದಿತ್ಯ, ದಿನೇಶ್, ಶಿವಕುಮಾರ್, ವಿ.ಪ್ರಶಾಂತ್, ಅಕ್ಷತಾ, ಸವಿತಾ, ಶ್ರೀಕಾಂತ್ ಉಡುಪ, ಶ್ವೇತಾ, ಹಳೆ ನವೋದಯ ವಿದ್ಯಾರ್ಥಿಗಳಿಗಳಾದ ಪುನೀತ್, ಕೆ.ಎಂ.ಸುನಿಲ್, ರಮ್ಯಾ ರಾವ್, ಸಿಂಧು ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net