

ಹಿರೇಕೆರೂರ: ರಾಜ್ಯದ ಅಭಿವೃದ್ಧಿಯ ಜತೆಗೆ ಬಡವರ ಕಲ್ಯಾಣ ಸರ್ಕಾರದ ಮುಖ್ಯ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ರಟ್ಟಿಹಳ್ಳಿ, ಹಿರೇಕೆರೂರ ತಾಲೂಕು ಆಹಾರ ಮತು ನಾಗರಿಕ ಸರಬರಾಜು ಇಲಾಖೆ, ಪಡಿತರ ವಿತರಕರ ಸಂಘ, ಟಿಎಪಿಸಿಎಂಎಸ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಫಲಾನುಭವಿಗಳ ಜತೆ ಸಂವಾದ ಮತ್ತು ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಡವರ ಜೀವನಕ್ಕೆ ಆಧಾರವಾದ ಯೋಜನೆಗಳನ್ನು ರೂಪಿಸಿ ಅದನ್ನು ಜಾರಿ ಮಾಡಿದ್ದು, ಅತಿವೃಷ್ಟಿ, ಬರಗಾಲದ ನಡುವೆ ಜನ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಉಪನಿರ್ದೇಶಕ ರಮೇಶ ಎಂ.ಎಸ್. ಮಾತನಾಡಿ, ಜುಲೈ 2023 ರಿಂದ ಡಿಸೆಂಬರ್ 2024ರವರೆಗೆ ಪ್ರತಿ ಫಲಾನುಭವಿಗೆ 170 ರೂ. ಜಮಾ ಮಾಡಲಾಗಿದೆ. ಫೆಬ್ರವರಿ ತಿಂಗಳಿನಿಂದ ಹಣದ ಬದಲಾಗಿ ಅಕ್ಕಿ ವಿತರಣೆಗೆ ಸರ್ಕಾರ ಆದೇಶಿಸಿದೆ. ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡಬಾರದು. ಒಂದು ವೇಳೆ ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಕಂಡುಬಂದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಹಿರೇಕೆರೂರ, ರಟ್ಟಿಹಳ್ಳಿ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮಲ್ಲೀಕಾರ್ಜುನ ಬುರಡಿಕಟ್ಟಿ, ನಾರಾಯಣಪ್ಪ ಗೌರಕ್ಕನವರ ಮಾತನಾಡಿದರು.
ಫಲಾಭವಿಗಳ ಜತೆ ಶಾಸಕರು ಸಂವಾದ ನಡೆಸಿ ಬಳಿಕ ಅಕ್ಕಿ ವಿತರಿಸಿದರು. ನಂತರ ಇಲಾಖೆ, ಪಡಿತರ ವಿತರಕರ ಸಂಘ, ಟಿಎಪಿಸಿಎಂಎಸ್ ವತಿಯಿಂದ ಶಾಸಕರನ್ನು, ಗಣ್ಯರನ್ನು ಸನ್ಮಾನಿಸಲಾಯಿತು.
ಹಿರೇಕೆರೂರ ತಹಸೀಲ್ದಾರ್ ಎಚ್.ಪ್ರಭಾಕರಗೌಡ, ರಟ್ಟಿಹಳ್ಳಿ ತಹಸೀಲ್ದಾರ್ ಶ್ವೇತಾ ಅಮರಾವತಿ, ಟಿಎಪಿಸಿಎಂಎಸ್ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಮೇಶ ಮಡಿವಾಳರ, ಪಪಂ ಅಧ್ಯಕ್ಷೆ ಸುಧಾ ಚಿಂದಿ, ಉಪಾಧ್ಯಕ್ಷ ರಾಜು ಕರಡಿ, ಸದಸ್ಯರಾದ ಕಂಠಾಧರ ಅಂಗಡಿ, ಸನಾವುಲ್ಲಾ ಮಕಾನದಾರ, ರಮೇಶ ಕೋಡಿಹಳ್ಳಿ, ಕವಿತಾ ಹಾರ‌್ನಳ್ಳಿ ಇತರರಿದ್ದರು.
ಅಧಿಕಾರಿಗಳಾದ ಗೀತಾ, ಹರೀಶ ದಾಸರ, ನಾಗರಾಜ ಕಟ್ಟಿಮನಿ ನಿರ್ವಹಿಸಿದರು.
ರಟ್ಟಿಹಳ್ಳಿ, ಹಿರೇಕೆರೂರ ತಾಲೂಕಿನಲ್ಲಿ 59,890 ಪಡಿತರ ಕಾರ್ಡುಗಳಿದ್ದು, 2,16,950 ಫಲಾಭವಿಗಳಿದ್ದಾರೆ. ಜುಲೈ 2023 ರಿಂದ ನವಂಬರ್ 2024ರವರೆಗೆ ಪ್ರತಿ ಸದಸ್ಯರಿಗೆ 170 ರೂಗಳಂತೆ ಒಟ್ಟು 47 ಕೋಟಿ ರೂ. ಜಮಾ ಆಗಿದೆ. ಇದರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನಭಾಗ್ಯ ಯೋಜನೆಯಡಿ ಈ ಕ್ಷೇತ್ರದಲ್ಲಿ 9800 ಕ್ವಿಂಟಾಲ್ ಪ್ರತಿ ತಿಂಗಳು ಹಂಚಿಕೆಯಾಗುತ್ತಿದೆ. ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯಡಿ 9500 ಅಕ್ಕಿ ವಿತರಣೆಯಾಗುತ್ತಿದೆ. ಮಾರ್ಚ್ ತಿಂಗಳಲ್ಲಿ 15 ಕೆಜಿಯಂತೆ 28,800 ಕ್ವಿಂಟಾಲ್ ಅಕ್ಕಿ ವಿತರಣೆಯಾಗುತ್ತಿದೆ. ಯು.ಬಿ. ಬಣಕಾರ, ಶಾಸಕ