ಧರ್ಮ ಸಂರಕ್ಷಣೆ ಸಂಘದ ಮೂಲಧ್ಯೇಯ

The main mission of the Dharma Preservation Society
ಮುಧೋಳದಲ್ಲಿ ವಿಜಯದಶಮಿ ನಿಮಿತ್ತ ಆರ್‌ಎಸ್‌ಎಸ್ ವತಿಯಿಂದ ಪಥಸಂಚಲನ ನಡೆಯಿತು.
Published on

ಮುಧೋಳ: ಭಯೋತ್ಪಾದಕರು, ಕೋಮುವಾದಿಗಳು, ಬುದ್ಧಿ ಇಲ್ಲದ ಬುದ್ಧಿಜೀವಿಗಳಿಗೆ ಆರ್‌ಎಸ್‌ಎಸ್ ಸಿಂಹಸ್ವಪ್ನವಾಗಿದೆ. ಹಿಂದುತ್ವ, ದೇಶಭಕ್ತಿ ನೆಲೆಗಟ್ಟಿನಲ್ಲಿ ಸಂಘ ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ದಾಮೋದರಜಿ ಹೇಳಿದರು.

ನಗರದಲ್ಲಿ ಭಾನುವಾರ ಸಂಜೆ ಆರ್‌ಎಸ್‌ಎಸ್ ಪಥಸಂಚಲನ ಬಳಿಕ ಹೇಮರಡ್ಡಿ ಮಲ್ಲಮ್ಮ ಕ್ರೀಡಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮ ರಕ್ಷಣೆಯ ಮೂಲ ಧ್ಯೇಯವನ್ನಿಟ್ಟುಕೊಂಡು ನಾಗಪುರದಲ್ಲಿ ಹೆಡಗೆವಾರ ನೇತತ್ವದಲ್ಲಿ ಸ್ಥಾಪನೆಯಾದ ಆರ್‌ಎಸ್‌ಎಸ್ ದಿನದಿಂದ ದಿನಕ್ಕೆ ಬೆಳೆದು ಇಂದು ಎಪ್ಪತ್ತೇಳು ಸಾವಿರ ನಗರ, ಪಟ್ಟಣ, ಗ್ರಾಮಗಳಲ್ಲಿ ಶಾಖೆ ಹೊಂದಿದೆ ಎಂದರು.

ದೇಶ ಸೇವೆಗಾಗಿ ಮುಡಿಪಾಗಿರುವ ಸಂಘದ ಶಾಖಾ ವಿಸ್ತಾರ ಹೆಚ್ಚಿನ ಮಟ್ಟದಲ್ಲಾಗಬೇಕು. ದೇಶದ ಪ್ರತಿ ಗ್ರಾಮದಲ್ಲೂ ಭಗವಾ ಧ್ವಜ ಹಾರಾಡಬೇಕು. ಪರಿಸರ ಹಾನಿಯಿಂದ ಮುಂದಿನ ದಿನದಲ್ಲಿ ದೇಶದಲ್ಲಿ ಉಸಿರಾಟ ತೊಂದರೆಯಾಗಲಿದೆ. ಪರಿಸರ ಸಂರಕ್ಷಣೆಗಾಗಿ ಸಂಘ ತೊಡಗಿಕೊಳ್ಳಬೇಕು ಎಂದರು.

ದೇಶದ ಮಹಾನ್ ನಾಯಕರನ್ನು ಆಯಾ ಜಾತಿಗೆ ಸೀಮಿತಗೊಳಿಸಲಾಗಿದೆ. ಇದೆಲ್ಲವನ್ನು ಹೋಗಲಾಡಿಸಿ ಸರ್ವರು ಸಮಾನರೂ ಎಂಬ ಮನೋಭಾವ ಬೆಳೆಸಿ ಸಮಾಜದಲ್ಲಿ ಸಾಮರಸ್ಯ ನೆಲೆ ನಿಲ್ಲುವಂತೆ ಮಾಡಬೇಕು. ಕುಟುಂಬ ಪ್ರಬೋಧನ ಕಾರ್ಯದ ಮೂಲಕ ಮಕ್ಕಳಲ್ಲಿ ದೇಶಭಕ್ತಿ ಮೂಡಿಸಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ತಿಲಾಂಜಲಿ ಇಟ್ಟು ದೇಶದ ಸಂಸ್ಕೃತಿ ಬೆಳೆಸುವ ಮೂಲಕ ಸ್ವದೇಶಿ ಜೀವನಶೈಲಿ ವದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು. ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಟ್ರಸ್ಟ್ ಸದಸ್ಯ ಅಶೋಕ ಪಾಟೀಲ ಇದ್ದರು. ಪ್ರಕಾಶ ರಾಮತೀರ್ಥ ಸ್ವಾಗತಿಸಿ ಪರಿಚಯಿಸಿದರು. ಸುನೀಲ ಬಿರಾದಾರ ಅಮತವಚನ ನಡೆಸಿಕೊಟ್ಟರು. ಬಸವರಾಜ ಕಂಬಾರ ವಂದಿಸಿದರು.

ಆಕರ್ಷಕ ಪಥ ಸಂಚಲನ

ನಗರದಲ್ಲಿ ಭಾನುವಾರ ಆರ್‌ಎಸ್‌ಎಸ್ ಗಣವೇಷಧಾರಿಗಳಿಂದ ಭವ್ಯ ಪಥಸಂಚಲನ ನಡೆಯಿತು. ರೋಟರಿ ಆಂಗ್ಲ ಮಾಧ್ಯಮ ಶಾಲೆಯಿಂದ ಪ್ರಾರಂಭಗೊಂಡ ಪಥ ಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಮಲ್ಲಮ್ಮ ನಗರದ ಕಲ್ಯಾಣ ಮಂಟಪದ ಆವರಣ ತಲುಪಿತು. ದಾರಿಯುದ್ದಕ್ಕೂ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ಎಲ್ಲೆಡೆ ಕೇಸರಿ ಧ್ವಜಗಳು ರಾರಾಜಿಸಿದವು. ಭವ್ಯ ಪಥ ಸಂಚಲನದಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಸಾರ್ವಜನಿಕರು ಪುಷ್ಪಾರ್ಚನೆ ಮಾಡಿದರು. ನಗರದ ಪ್ರಮುಖ ವತ್ತಗಳಲ್ಲಿ ಚಿಣ್ಣರು ಕಿತ್ತೂರು ಚನ್ನಮ್ಮ, ಒನಕೆ ಓಬವ್ವ, ಸುಭಾಷ್‌ಚಂದ್ರ ಬೋಸ್, ವಿವೇಕಾನಂದ, ಭಗತ್‌ಸಿಂಗ್, ರಾಜಗುರು-ಸುಖದೇವ್ ಇತರ ಸ್ವಾತಂತ್ರ್ಯ ಯೋಧರ ಹಾಗೂ ಸ್ವಾತಂತ್ರ್ಯ ಸೇನಾನಿಗಳ ವೇಷಭೂಷಣ ತೊಟ್ಟು ಪಥಸಂಚಲನಕ್ಕೆ ಸ್ವಾಗತ ಕೋರಿದರು. ನೂರಾರು ಸ್ವಯಂ ಸೇವಕರು,ನಗರದ ಪ್ರಮುಖರು, ಗಣ್ಯರು, ವ್ಯಾಪಾರಸ್ಥರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net