

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸುತ್ತಿದ್ದು, ಚಿನ್ನದ ಅಂಬಾರಿ ಕಟ್ಟಲು ಬಳಸುವ ಸೆಣಬಿನ ಹಗ್ಗವನ್ನು ತಯಾರು ಮಾಡಿಕೊಳ್ಳಲಾಗಿದೆ.
ದಾವಣಗೆರೆಯಿಂದ ತರಿಸಿದ್ದ 150 ಕೆ.ಜಿ. ತೂಕದ ಸೆಣಬಿನಲ್ಲಿ 25 ಮೀಟರ್ ಉದ್ದದ ಮೂರು ಹಗ್ಗ ತಯಾರಿಸಲಾಗಿದೆ. ಗಜಪಡೆ ಬೀಡುಬಿಟ್ಟಿರುವ ಅರಮನೆ ಅಂಗಳದಲ್ಲೇ ಬುಧವಾರ ಮಾವುತರು, ಕಾವಾಡಿಗಳು, ವಿಶೇಷ ಮಾವುತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಗ್ಗ ಹೆಣೆದರು. ಗಜಪಡೆಗೆ ಭಾರ ಹೊರುವ ತಾಲೀಮು ನಡೆಸುವಾಗ, ಮರದ ಅಂಬಾರಿ ತಾಲೀಮು ನಡೆಸುವಾಗ ಹಾಗೂ ಜಂಬೂಸವಾರಿ ದಿನ ಅಂಬಾರಿ ಕಟ್ಟಲು ಸೆಣಬಿನ ಹಗ್ಗವನ್ನು ಬಳಸಲಾಗುತ್ತದೆ.