ಮೈಸೂರು ಸುಂದರ ನಗರವಾಗಿ ರೂಪುಗೊಳ್ಳಲು ಮಹಾರಾಜರ ಕೊಡುಗೆ ಅಪಾರ

cftri
Published on

ಮೈಸೂರು: ಮೈಸೂರು ಮಹಾರಾಜರ ಪರಿಶ್ರಮದಿಂದ ಮೈಸೂರು ಸುಂದರ ನಗರವಾಗಿ ರೂಪುಗೊಂಡಿದೆ ಎಂದು ಸಾಹಿತಿ ಪ್ರೊ. ಕೃಷ್ಣೇಗೌಡ ಹೇಳಿದರು.

ನಗರದ ಕಲಾಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಿಎಫ್‌ಟಿಆರ್‌ಐ ಶಾಲೆಯ ವಜ್ರಮಹೋತ್ಸವ ಸಮಾರಂಭದಲ್ಲಿ ಮಾತನಾಡಿ, ನಾಲ್ವಡಿ ಕೃಷ್ಣರಾಜರಂತಹ ಮಹಾರಾಜ ಇದ್ದರೆ ದೇಶಕ್ಕೆ ಸ್ವಾತ್ರಂತ್ರೃವೇ ಬೇಡ ಎಂದು ಸರ್ದಾರ್ ವಲ್ಲಭ ಭಾಯಿ ಪಟೇಲ್ ಅಭಿಪ್ರಾಯಪಟ್ಟಿದ್ದರು. ನಮಗೆ ಸ್ವಾತಂತ್ರೃ ಬರುವ ಮುನ್ನವೇ ಮೈಸೂರು ಮಹಾರಾಜರು ಪ್ರಜಾಪ್ರತಿನಿಧಿ ಸಭೆಯನ್ನು ಪ್ರಾರಂಭಿಸಿ ಪ್ರಜಾಪ್ರಭುತ್ವದ ವಾತಾವರಣ ನಿರ್ಮಾಣ ಮಾಡಿದ್ದರು. ದೇಶದಲ್ಲಿ ಮೀಸಲಾತಿ ಜಾರಿಗೆ ಬರುವ ಮುನ್ನವೇ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ನೀಡಲಾಗಿತ್ತು. ಮಹಾರಾಜರು ಚೆಲುವಾಂಬ ವಿಲಾಸ ಅರಮನೆಯನ್ನು ವೈಜ್ಞಾನಿಕ ಸಂಶೋಧನೆಗೆ ಸಿಎಸ್‌ಆರ್‌ಐ- ಸಿಎಫ್‌ಟಿಆರ್‌ಗೆ ದಾನವಾಗಿ ನೀಡಿದ್ದರು. ಈ ರೀತಿ ಮೈಸೂರು ಅಭಿವೃದ್ಧಿಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ ಎಂದು ಸ್ಮರಿಸಿದರು.

ಈ ಹಿಂದೆ ಒಂದು ಗ್ರಾಮದಲ್ಲಿ ಒಬ್ಬ ವಿದ್ಯಾವಂತ ಸಿಗುತ್ತಿರಲಿಲ್ಲ. ಆದರೆ, ಪ್ರಸ್ತುತ ಮಕ್ಕಳಿಗೆ ಶಿಕ್ಷಣ ನೀಡುವುದು ಪಾಲಕರ ಪ್ರಥಮ ಆದ್ಯತೆಯಾಗಿದೆ. ಕೇವಲ ಶಿಕ್ಷಣ ನೀಡುವುದು ಮಾತ್ರವಲ್ಲ ಗುಣಮಟ್ಟದ ಶಿಕ್ಷಣ ಕೊಡಿಸಲು ಹೆಚ್ಚಿನ ಆಸಕ್ತಿ ತೋರುತ್ತಿರುವುದು ಸಂತಸದ ವಿಚಾರ. ಪ್ರಸ್ತುತ ಎಲ್ಲರೂ ವಿದ್ಯಾವಂತರಾಗುತ್ತಿದ್ದಾರೆ. ಹಾಗಾಗಿ ಸ್ಪರ್ಧಾತ್ಮಕ ಯುಗದಲ್ಲಿ ಇನ್ನು ಮುಂದೆ ಪದವಿಗಳು ಕೆಲಸಕ್ಕೆ ಬರುವು ದಿಲ್ಲ. ನಿಮ್ಮಲ್ಲಿರುವ ಜ್ಞಾನ ಮಾತ್ರ ನಿಮಗೆ ಸಹಕಾರಿಯಾಗಲಿದೆ. ಮುಂದಿನ ಜಗತ್ತು ಜ್ಞಾನ ಹಾಗೂ ಕೌಶಲದಿಂದ ಕೂಡಿರುತ್ತದೆ. ನಿಮ್ಮಲ್ಲಿ ಉತ್ತಮ ಜ್ಞಾನ ಇದ್ದರೆ ಪದವಿ ಇಲ್ಲದೆ ಇದ್ದರೂ ಉದ್ಯೋಗ ದೊರೆಯುತ್ತದೆ. ನಿಮ್ಮಲ್ಲಿ ಜ್ಞಾನ ಇದ್ದರೆ ಉದ್ಯೋಗ ನೀಡುವವರು ಮನೆ ಬಾಗಿಲಿಗೆ ಬಂದು ಉದ್ಯೋಗ ನೀಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.

ಶಾಲೆಗಳು ವಿದ್ಯಾರ್ಥಿಯ ಸಾಮರ್ಥ್ಯ ಎತ್ತರಿಸುವುದಕ್ಕೆ ಬೇಕಾದ ವಾತಾವರಣ ನಿರ್ಮಾಣ ಮಾಡಬೇಕು. ಶಾಲೆ ಎಂಬುದು ವಿದ್ಯಾರ್ಥಿಗಳು ಮಾತ್ರ ಕಲಿಯುವ ಜಾಗವಲ್ಲ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಜತೆಗೂಡಿ ಕಲಿಯುವ ಜಾಗ ಎಂದು ಹೇಳಿದರು.

ಸಿಎಫ್‌ಟಿಆರ್‌ಐ ನಿವೃತ್ತ ನಿರ್ದೇಶಕ, ಪದ್ಮಶ್ರೀ ಪುರಸ್ಕತ ಡಾ.ವಿ. ಪ್ರಕಾಶ್ ಮಾತನಾಡಿ, ಮಹಾರಾಜರು ಸಿಎಫ್‌ಟಿಆರ್‌ಐ ಸ್ಥಾಪನೆಗೆ ಅರಮನೆಯನ್ನು ದಾನವಾಗಿ ನೀಡಿದರು. ಅವರು ಅರಮನೆಯನ್ನು ನೀಡದೆ ಹೋಗಿದ್ದರೆ ಸಿಎಫ್‌ಟಿಆರ್‌ಐ ಶಾಲೆ ಇರುತ್ತಿರಲಿಲ್ಲವೇನೋ ಏನೋ. ಕ್ಯಾರೊಲಿನ್ ಡಬ್ಲುೃ. ಪಾರ್ಪಿಯಾ ಶಾಲೆಯನ್ನು ಪ್ರಾರಂಭಿಸಿದರು. ಅವರು ನೆಟ್ಟ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ. ಶ್ರೀ ಜಯಚಾಮರಾಜ ಒಡೆಯರ್ 1950 ಸಂಸ್ಥೆಗೆ ಜಾಗ ನೀಡಿದರು. ಸಂಸ್ಥೆಯ ಬೆಳವಣಿಗೆಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಕೊಡುಗೆ ಅಪಾರ ಎಂದು ಸ್ಮರಿಸಿದರು.

ಸಿಎಫ್‌ಟಿಆರ್‌ಐ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಕರು ಇದ್ದು, ಇಲ್ಲಿ ಓದಿದವರ ಭವಿಷ್ಯ ಉಜ್ವಲವಾಗುತ್ತದೆ ಎಂಬ ಭಾವನೆ ಎಲ್ಲ ಪಾಲಕರಲ್ಲಿ ಇದೆ. ಇದಕ್ಕೆ ಶಾಲೆಯ ಶಿಕ್ಷಕರ ಪರಿಶ್ರಮ ಕಾರಣ. ಶಾಲೆಯಲ್ಲಿ ಉತ್ತಮ ಶಿಸ್ತು ಇದ್ದು, ಮಕ್ಕಳಲ್ಲಿ ಶಿಸ್ತು ಮೂಡಿಸಲು ಇದು ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಳವಳ್ಳಿಯ ಶ್ರೀ ಮಂಠೇಸ್ವಾಮಿ ಮಠದ ಶ್ರೀ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಮಾತ ನಾಡಿ, ಮೈಸೂರು ಮಹಾರಾಜರು ಹಲವಾರು ಕೊಡುಗೆಗಳನ್ನು ನೀಡಿದ್ದು, ಸಿಎಫ್‌ಟಿಆರ್‌ಐಗೆ ಮೈಸೂರು ಮಹಾರಾಜರು ಅರಮನೆಯನ್ನು ನೀಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದರು.

ತಂತ್ರಜ್ಞಾನ ಪ್ರತಿಯೊಬ್ಬರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ತಂತ್ರಜ್ಞಾನದಿಂದ ಸಾಕಷ್ಟು ಅನುಕೂಲ ಇದೆ. ಅದೇ ರೀತಿ ಅನಾನುಕೂಲ ಸಹ ಇದೆ. ಹಾಗಾಗಿ ತಂತ್ರಜ್ಞಾನವನ್ನು ಸರಿಯಾಗಿ ಬಳಕೆ ಮಾಡಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.

ಉದ್ಯಮಿ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಸಿದ್ ಮುಖರ್ಜಿ ಮಾತನಾಡಿ, ಸಿಎಫ್‌ಟಿಆರ್‌ಐ ಶಾಲೆಯು ವಿದ್ಯಾರ್ಥಿಗಳಲ್ಲಿ ಉತ್ತಮ ಸಂವಹನ ಕೌಶಲವನ್ನು ಬೆಳೆಸುತ್ತಿದೆ. ಶಾಲೆಯಲ್ಲಿ ನಾನು ಕಲಿತ ಸಂವಹನ ಕೌಶಲವು ನನ್ನ ಯಶಸ್ಸಿಗೆ ಕಾರಣವಾಯಿತು. ಶಾಲೆಯು 60 ವರ್ಷಗಳನ್ನು ಪೊರೈಸಿದ್ದು ಸಣ್ಣ ವಿಚಾರವಲ್ಲ ಎಂದರು.

ಕಲಿಕೆ ಎಂಬುದು ಪಠ್ಯ ಪುಸ್ತಕದ ಕೊನೆಯ ಪುಠದಲ್ಲಿ ಮುಕ್ತಾಯಗೊಳ್ಳುವುದಿಲ್ಲ, ಕಲಿಕೆ ಎಂಬುದು ನಿತ್ಯ ನಿರಂತರವಾಗಿ ಮುಂದು ವರೆಯುತ್ತದೆ. ಹಾಗಾಗಿ ವಿದ್ಯಾಭ್ಯಾಸ ಪೂರ್ಣಗೊಂಡ ನಂತರವೂ ನಿರಂತರ ಕಲಿಕೆಯಲ್ಲಿ ತೊಡಗಿದರೆ ಯಶಸ್ಸು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಶಾಲಾ ಸಂಸ್ಥಾಪಕಿ ದಿ.ಕ್ಯಾರೊಲಿನ್ ಡಬ್ಲುೃ. ಪಾರ್ಪಿಯಾ ಪುತ್ರಿ ಜೂಲಿ ಕಾರ್ಯಪ್ಪ, ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net