ವಿಜೃಂಭಣೆಯ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ

ವಿಜೃಂಭಣೆಯ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ
Published on

ಸರಗೂರು: ಕೆ ಬೆಳ್ತೂರು ಇತಿಹಾಸ ಪ್ರಸಿದ್ಧ ಲಕ್ಷ್ಮೀ ನಾರಾಯಣ ಸ್ವಾಮಿ ರಥೋತ್ಸವ ಭಾನುವಾರ ಬೆಳಗ್ಗೆ ನೂರಾರು ಭಕ್ತರ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ 8.45ಕ್ಕೆ ಉತ್ಸವ ಮೂರ್ತಿಯನ್ನು ಅಲಂಕರಿಸಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಮೂಲಕ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. 9.45ಕ್ಕೆ ಉತ್ಸವ ರಥದಲ್ಲಿ ಪ್ರತಿಷ್ಠಾಪಿಸಿದ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. 11 ಗಂಟೆ ವೇಳೆಗೆ ಎಲ್ಲ ಸಮುದಾಯದ ಯಜಮಾನರು ಮುಂತಾದವರು ಉತ್ಸವ ಮೂರ್ತಿಗೆ ಪುಷ್ಪವೃಷ್ಟಿ ಮಾಡಿದರು.

ಧರ್ಮದರ್ಶಿ ಮಂಡಳಿ ಅಧ್ಯಕ್ಷ ವಿನಯ್ ಬುದ್ಧಿ ಹಾಗೂ ಇತರ ಪ್ರಮುಖರ ಸಮ್ಮುಖದಲ್ಲಿ ಪೂಜೆ ಹಾಗೂ ಮಹಾ ಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ದಾಸ ದೀಕ್ಷೆ ಪಡೆದವರು ಸಾಂಪ್ರದಾಯಿಕ ಉಡುಗೆ ತೊಟ್ಟು ಜಾಗಟೆ ಹಾಗೂ ಶಂಕಾನಾದ ಮೊಳಗಿಸಿದರು. ತಮ್ಮ ಇಷ್ಟದೈವ ಲಕ್ಷ್ಮೀ ನಾರಾಯಣನಿಗೆ ಜಯಘೋಷ ಕೂಗಿ ಹಣ್ಣು ದವನ ಹಾಗೂ ದವಸ ಧಾನ್ಯಗಳನ್ನು ಎಸೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.

ರಥ ದೇವಸ್ಥಾನದ ಮುಂಭಾಗ ಇರುವ ರಥದ ಬೀದಿಯಲ್ಲಿ 5 ಗಂಟೆಗಳ ಕಾಲ ಚಲಿಸಿ ಸಂಜೆ 4ಕ್ಕೆ ಮೂಲ ಸ್ಥಾನಕ್ಕೆ ಬಂದು ಸೇರಿತು. ರಥೋತ್ಸವ ಸಂದರ್ಭದಲ್ಲಿ ರಥದ ಬೀದಿಯಲ್ಲಿರುವ ಮನೆಯವರು ರಥಕ್ಕೆ ಪೂಜೆ ಸಲ್ಲಿಸಿದರು. ಪಟ್ಟಣದ ಬಹುತೇಕ ಜನರ ಮನೆ ದೇವರಾಗಿರುವ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ ಸಂದರ್ಭದಲ್ಲಿ ದೇವರಿಗೆ ವಿಶೇಷ ಪೂಜೆ ಹಾಗೂ ಹರಕೆ ಸಲ್ಲಿಸುವ ಮೂಲಕ ಸಂಭ್ರಮಿಸಿದರು. ನಾಯಕರ ಬೀದಿ, ಮೋಳೆ ಮತ್ತಿತರ ಕಡೆ ಹಬ್ಬದ ಸಂಭ್ರಮವಿತ್ತು.

ಮಜ್ಜಿಗೆ ಪಾನಕ ವಿತರಣೆ: ರಥದ ಬೀದಿ ಉದ್ದಕ್ಕೂ ಇರುವ ಮನೆಗಳವರು ರಥೋತ್ಸವಕ್ಕೆ ಬರುವ ಜನರಿಗೆ ನೀರು ಮಜ್ಜಿಗೆ, ಪಾನಕ, ಕೋಸಂಬರಿ ಹಾಗೂ ಹಣ್ಣು ಹಂಪಲನ್ನು ನೀಡಿ ದಣಿವಾರಿಸಿಕೊಳ್ಳುವಂತೆ ಮಾಡಿದರು. ಬೇಸಿಗೆ ಬಿರು ಬಿಸಿಲಿನಿಂದ ಬಳಲಿರುವ ಭಕ್ತರು ತಂಪು ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ತಿಂದು ಸಂತೃಪ್ತರಾದರು. ರಥವನ್ನು ಹಿಂಭಾಗದಿಂದ ತಳ್ಳುವ ಸಾಹಸದ ಕಾರ್ಯ ಮಾಡುವ ಯುವ ಪಡೆಗೆ ಇಲ್ಲಿನ ಜನರು ವಿಶೇಷವಾಗಿ ಉಪಚಾರ ಮಾಡಿ ಸತ್ಕರಿಸುವ ಜತೆಗೆ ಎಲ್ಲರೂ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ಈ ಬಾರಿ ರಥೋತ್ಸವದ ಪ್ರಯುಕ್ತ ದೇವಸ್ಥಾನಗಳು ಹಾಗೂ ಇತರೆಡೆ ಚಪ್ಪರ ಹಾಕಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಯುವಕರು ಕುಣಿದು ಸಂಭ್ರಮಿಸಿದರು.

ಮಹಿಳೆಯರೇ ಹೆಚ್ಚು: ಈ ಬಾರಿ ರಥೋತ್ಸವದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಪೂಜೆಗೂ ಸೈ ರಥ ಎಳೆಯಲು ಸೈ ಎಂದು ಮಹಿಳೆಯರು ಉತ್ಸಾಹದಿಂದ ರಥ ಎಳೆದು ಗಮನ ಸೆಳೆದರು.

ಟ್ರಸ್ಟ್ ಅಧ್ಯಕ್ಷ ಪಾರ್ಥಸಾರಥಿ, ನಾಡಗೌಡ ಸುರೇಂದ್ರ ಗೌಡ, ನಾಯಕ ಸಮಾಜದ ಯಜಮಾನ ಕಂಡನಾಯಕ, ರಾಜನಾಯಕ, ಆದಿಕರ್ನಾಟಕ ಸಮಾಜದ ಯಜಮಾನ ರುದ್ರಯ್ಯ, ಚಾಮರಾಜು, ಬಿ.ಎಂ. ಪ್ರಕಾಶ್, ದೇವರಾಜು, ನಾಗನಾಯಕ, ಸೋಮನಾಯಕ, ಮಹದೇವಗೌಡ, ನಾಗೇಂದ್ರ, ಸಿಂಗ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net