

ಹಿರೀಸಾವೆ: ಪಟ್ಟಣದ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಗ್ರಾಮದಲ್ಲಿ ನಾಲ್ಕು ದಿನಗಳಿಂದ ದೇವಿ ಹಬ್ಬ ನಡೆಯುತ್ತಿದ್ದು, ನಿತ್ಯ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ವಿಧಿ ವಿಧಾನಗಳು ನೆರವೇರುತ್ತಿದ್ದವು. ಜತೆಗೆ ಪ್ರತಿ ದಿನ ರಾತ್ರಿ ನಡೆಯುತ್ತಿದ್ದ ರಂಗದ ಕುಣಿತ ನೋಡುಗರ ಗಮನ ಸೆಳೆಯುತ್ತಿತ್ತು.
ಬ್ರಹ್ಮ ರಥೋತ್ಸವ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ದೇಗುಲದಲ್ಲಿ ಪೂಜಾ ಕೈಂಕರ್ಯ ಪ್ರಾರಂಭಗೊಂಡಿತು. ಭಕ್ತರು ಹಣ್ಣು, ಕಾಯಿ ಅರ್ಪಿಸಿ ಗಂಧ-ಕರ್ಪೂರ ಬೆಳಗಿಸಿದರು. ಮುಂಜಾನೆ ಉಯ್ಯಲೆ ಬೀದಿಯಲ್ಲಿ ರಥವನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಜತೆಗೆ ದೇವಿಯ ಉತ್ಸವ ಮೂರ್ತಿಯನ್ನು ಒಡವೆ, ವಸ್ತ್ರ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಲಾಯಿತು. ಮಧ್ಯಾಹ್ನದ ವೇಳೆಗೆ ಮೂಲ ಸನ್ನಿಧಿಯಿಂದ ಮಂಗಳವಾದ್ಯದೊಂದಿಗೆ ಚೌಡೇಶ್ವರಿ ದೇವಿಯ ಅಡ್ಡಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡು ಪ್ರಮುಖ ಬೀದಿಯಲ್ಲಿ ಸಾಗಿತು. ಭಕ್ತರು ಈಡುಗಾಯಿ ಒಡೆದು ಭಕ್ತಿ ಸಮರ್ಪಿಸಿದರು.
ಹೆಣ್ಣು ಮಕ್ಕಳು ಬಾಯಿ ಬೀಗ ಹಾಕಿಸಿಕೊಂಡು ಉತ್ಸವದಲ್ಲಿ ಪಾಲ್ಗೊಂಡರು. ಉತ್ಸವವನ್ನು ಉಯ್ಯಲೆ ಬೀದಿಗೆ ಕರೆತಂದು ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ಪ್ರಧಾನ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಸಿ.ಎನ್.ಬಾಲಕೃಷ್ಣ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಜಯಘೋಷದೊಂದಿಗೆ ಹಗ್ಗ ಹಿಡಿದು ರಥ ಎಳೆದರು. ಹೆಣ್ಣು ಮಕ್ಕಳು ಬಾಳೆ ಹಣ್ಣು, ಹೂವು ಎಸೆದು ಜಯಘೋಷ ಮೊಳಗಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ಮಾಜಿ ಉಪಾಧ್ಯಕ್ಷ ಎಚ್.ಸಿ.ವಿಜಯಕುಮಾರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ಯಾಮಲಾ ಉದಯಕುಮಾರ್, ಹಿರೀಸಾವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ರಾಮೇಗೌಡ, ಮಾಜಿ ಅಧ್ಯಕ್ಷರಾದ ಎಚ್.ಜೆ.ಮಹೇಶ್, ಎಚ್.ಈ.ಬೋರಣ್ಣ, ಪ್ರಮುಖರಾದ ರಾಮೇಗೌಡ, ಉದಯಕುಮಾರ್, ಪ್ರಮೋದ್, ಮಂಜು ಪಾಲ್ಗೊಂಡಿದ್ದರು.