

ಸರಗೂರು: ಭೀಮನಕೊಲ್ಲಿ ಮಹದೇಶ್ವರಸ್ವಾಮಿ ರಥೋತ್ಸವ ಹಾಗೂ ಕೊಂಡೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಸೋಮವಾರ ಸ್ವಾಮಿಯ ಮಠದಿಂದ ದೇವರ ಉತ್ಸವ ಮೂರ್ತಿಯನ್ನು ದೇವಾಲಯದ ಉದ್ಭವ ಸ್ಥಾನಕ್ಕೆ ಸಾಗಿಸಿ ಎಣ್ಣೆ ಮಜ್ಜನ ನಡೆಸಲಾಯಿತು. ನಂದಿಧ್ವಜಕ್ಕೆ, ಛತ್ರಿಚಾಮರಿಗಳಿಗೆ ಪೂಜೆ ಸಲ್ಲಿಸಲಾಯಿತು.
ಮಂಗಳವಾರ ಜಾತ್ರಾ ಮಹೋತ್ಸವ ಮತ್ತು ಅಗ್ನಿ ಕೊಂಡೋತ್ಸವ ಪೂಜೆ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ 10.30ರಿಂದ 12ರವರೆಗೆ ಸಲ್ಲುವ ಶುಭ ಲಗ್ನದಲ್ಲಿ ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿದ್ದ ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಮಹಾಮಂಗಳಾರತಿ ನೆರವೇರಿತು. ನಂತರ ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ರಾತ್ರಿ ಕೊಂಡೋತ್ಸವ ಪೂಜೆಯಲ್ಲೂ ಪಾಲ್ಗೊಂಡು ಸಂಭ್ರಮಿಸಿದರು.
ನಂತರ ಭಕ್ತರು ರಥವನ್ನು ಹೊತ್ತು ದೇವಸ್ಥಾನದ ಸುತ್ತ ಮೆರವಣಿಗೆ ನಡೆಸಿದರು. ದೇವಸ್ಥಾನದ ಭಕ್ತ ಮಂಡಳಿ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಸಮಿತಿ ಟ್ರಸ್ಟ್ ಅಧ್ಯಕ್ಷ ಎಂ.ಪಿ.ಎನ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆಂಚನಹಳ್ಳಿ ಜಗದೀಶ್, ಉಪಾಧ್ಯಕ್ಷ ಗುರುಮಲ್ಲಪ್ಪ, ಸಮಿತಿ ಸದಸ್ಯರು ಸುಂದರ್ ದಾಸ್, ಬಿ.ಟಿ.ನರಸಿಂಹಮೂರ್ತಿ, ದೊಡ್ಡಯ್ಯ, ಗುರುಮೂರ್ತಿ, ಬಿ.ಎನ್.ಸುಬ್ಬಣ್ಣ, ಬಿ.ಎಂ.ಮಲ್ಲಿಕಾರ್ಜುನ್, ಗುರುಲಿಂಗಪ್ಪ, ಎಚ್.ಸಿ.ಮಲ್ಲಿಕಾರ್ಜುನ, ದಯಾನಂದ, ಬಿ.ಪಿ.ಮಾದಪ್ಪ, ಬಸವರಾಜು, ಬಿರಂಬಳ್ಳಿ ಬಸವಣ್ಣ, ಸುಬ್ರಹ್ಮಣ್ಯ, ಪಿ.ಎನ್. ನಂಜಪ್ಪ, ಮಳಲಿ ಕೆಂಚನಹಳ್ಳಿ, ಎನ್.ಬೇಗೂರು, ಎನ್ ಬೇಳತ್ತೂರು ಇನ್ನೂ ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.