

ಮಂಗಳೂರು: ಹೂಡಿಕೆಯಿಂದ ಹೆಚ್ಚು ಲಾಭಾಂಶ ಲಭಿಸುವುದಾಗಿ ನಂಬಿಸಿ 7.19 ಲಕ್ಷ .ರೂ. ವಂಚಿಸಿರುವ ಬಗ್ಗೆ ಹಿರಿಯ ನಾಗರಿಕರೊಬ್ಬರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
72 ವರ್ಷ ಪ್ರಾಯದ ದೂರುದಾರರು ಅ.3ರಂದು ಫೇಸ್ ಬುಕ್ ನೋಡುತ್ತಿದ್ದಾಗ ಹೂಡಿಕೆ ಬಗ್ಗೆ ಜಾಹಿರಾತು ಬಂದಿದೆ. ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಟೆಲಿಗ್ರಾಂ ಚಾನಲ್ ತೆರೆದುಕೊಂಡಿದೆ. ಟ್ರಿಡ್ ಗ್ರಿಪ್ ಅಕೌಂಟ್ ಮ್ಯಾನೇಜರ್ ಎನ್ನುವ ಗ್ರೂಪ್ ಗೆ ಸೇರ್ಪಡೆಗೊಂಡಿದ್ದು, ಅದರಲ್ಲಿ ಸಾಗರ್ ಎಂಬಾತನ ಪರಿಚಯವಾಗಿದೆ. ಆತ ನೋಂದಣಿ ಮಾಡಿಸಿಕೊಳ್ಳಲು 19,300 ರೂ. ಹಾಕುವಂತೆ ತಿಳಿಸಿದ್ದಾನೆ.ಅದರಂತೆ ಅ.5ರಂದು 19,300 ರೂ. ಆತನಿಗೆ ಯುಪಿಐ ಮೂಲಕ ವರ್ಗಾಯಿಸಿದ್ದಾರೆ. ಬಳಿಕ ನಮ್ಮಸೀನಿಯರ್ ಮ್ಯಾನೇಜರ್ ನಿಮ್ಮ ಜತೆ ಮಾತನಾಡುತ್ತಾರೆ ಎಂದು ತಿಳಿಸಿದ್ದಾನೆ.
ಅನಂತರ ಸಾತ್ವಿಕ್ ಶೆಟ್ಟಿ ಎಂಬಾತನ ಪರಿಚಯವಾಗಿ ಆತ ಬೆಳ್ಳಿ ಮತ್ತು ಚಿನ್ನದ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಹೂಡಿಕೆ ಮಾಡಿ 13 ಲಕ್ಷ ರೂ. ಲಾಭಾಂಶ ಮಾಡಿಕೊಡುವುದಾಗಿ ತಿಳಿಸಿದ್ದಾನೆ. ಅದರಂತೆ ದೂರುದಾರರು ಅ.8ರಂದು 7 ಲಕ್ಷ ರೂ. ಹಾಕಿದ್ದಾರೆ. ಬಳಿಕ ಅ.9ರಂದು 1420 ಮತ್ತು 11,539 ರೂ. ಖಾತೆಗೆ ಬಂದಿದೆ. ಸಾತ್ವಿಕ್ ಶೆಟ್ಟಿ ಮತ್ತೆ ಆಮಿಷವೊಡ್ಡಿ ಅಮೆರಿಕದ 60 ಕಂಪೆನಿಯ ಗ್ರೂಪ್ ಇದೆ. ಅದರಲ್ಲಿ ಸೇರಿ ಹೂಡಿಕೆ ಮಾಡಿದರೆ 30 ಲಕ್ಷ ರೂ. ಲಾಭಾಂಶ ಬರುತ್ತದೆ ಎಂದು ತಿಳಿಸಿದ್ದಾನೆ.
ನಿಮ್ಮ ಪರವಾಗಿ ನಾನೇ 1 ಸಾವಿರ ಡಾಲರ್ ಹಾಕಿ ಅಕೌಂಟ್ ಓಪನ್ ಮಾಡಿ ಕೊಡುತ್ತೇನೆ, 10 ಲಕ್ಷ ರೂ. ಹೂಡಿಕೆ ಮಾಡಿ ಎಂದು ತಿಳಿಸಿದ್ದಾನೆ. ದೂರುದಾರರಿಗೆ ಸಂಶಯ ಬಂದು ಅ.10ರಂದು ಈ ಬಗ್ಗೆ ಸೈಬರ್ ಸಹಾಯವಾಣಿಗೆ ದೂರು ನೀಡಿದ್ದಾರೆ. ಬಳಿಕ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು, ಸಾಗರ್, ಸಾತ್ವಿಕ್ ಶೆಟ್ಟಿ ಮತ್ತು ಟ್ರಿಡ್ ಗ್ರಿಪ್ ಅಕೌಂಟ್ ಮ್ಯಾನೇಜರ್ ಎನ್ನುವ ಗ್ರೂಪ್ ನ ಅಡ್ಮಿನ್ ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ದೂರಿನಲ್ಲಿ ಆಗ್ರಹಿಸಿದ್ದಾರೆ.