

ಹನೂರು: ಸಾಮಾಜಿಕ ಆಂದೋಲನದಲ್ಲಿ ಹಡಪದ ಅಪ್ಪಣ್ಣ ಅವರ ಕೊಡುಗೆ ಅಪಾರವಾಗಿದ್ದು, ಅವರ ಕಾಯಕ ನಿಷ್ಠೆ ಉತ್ತಮ ಸಮಾಜಕ್ಕೆ ದಾರಿದೀಪ ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸವಿತಾ ಸಮಾಜ ವತಿಯಿಂದ ಆಯೋಜಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ದೇಶದ ಇತಿಹಾಸವನ್ನು ಅವಲೋಕಿಸಿದಾಗ ಶಿವಶರಣರು ಬೋಧನೆ, ವಚನ ಹಾಗೂ ಆಧ್ಯಾತ್ಮಿಕತೆ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಇದರಲ್ಲಿ ಹಡಪದ ಅಪ್ಪಣ್ಣ ಒಬ್ಬರು. 12ನೇ ಶತಮಾನದ ವಚನ ಚಳವಳಿ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದು, ಸುಮಾರು 200ಕ್ಕೂ ವಚನಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಶರಣರಿಗೆ ಇರಬೇಕಾದ ಕಾಯಕನಿಷ್ಠೆ, ಭಕ್ತಿ, ಆಚಾರ, ವಿಚಾರಗಳನ್ನು ವಚನಗಳಲ್ಲಿ ಸಾಹಿತ್ಯೀಕರಿಸಿದ್ದು, ಸಮಾಜದಲ್ಲಿದ್ದ ಮೌಢ್ಯತೆಯನ್ನು ಹೊಗಲಾಡಿಸಲು ಪಣ ತೊಟ್ಟಿದ್ದರು. ಹಾಗಾಗಿ ಇವರ ಆದರ್ಶ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಬಾರದು ಎಂದು ತಿಳಿಸಿದರು.
ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ಕಾಯಕದ ಜತೆಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಭವಿಷ್ಯದಲ್ಲಿ ಮಕ್ಕಳು ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ. ಜತೆಗೆ ಮಕ್ಕಳಿಗೆ ಐತಿಹಾಸಿಕ ಪ್ರಜ್ಞೆ ಬೆಳೆಸಬೇಕು. ಇದರಲ್ಲಿ ಸತ್ಯ ಅಡಗಿರುವುದರಿಂದ ಮಕ್ಕಳು ಸಮಾಜದಲ್ಲಿ ಎದುರಾಗುವ ಕಷ್ಟವನ್ನು ಧೈರ್ಯದಿಂದ ನಿಭಾಯಿಸಲು ಸಹಕಾರಿಯಾಗುತ್ತದೆ ಎಂದರು.
ಇದಕ್ಕೂ ಮುನ್ನ ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಅಶ್ವರೂಢ ವಾಹನದಲ್ಲಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ದೇಗುಲದ ಮುಂಭಾಗದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ವೀರಗಾಸೆ, ಡೊಳ್ಳುಕುಣಿತ, ನೃತ್ಯ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಭಾರತಿ ಅಪ್ಪಣ್ಣ ಸ್ವಾಮೀಜಿ, ಸಂಘದ ಜಿಲ್ಲಾಧ್ಯಕ್ಷ ವೆಂಕಟರಾಜು, ತಾಲೂಕು ಅಧ್ಯಕ್ಷ ಚಾ.ನಗರದ ಬಸವಣ್ಣ, ಗುಂಡ್ಲುಪೇಟೆಯ ವಿಠಲ, ಯಳಂದೂರಿನ ಶ್ರೀಕಂಠಸ್ವಾಮಿ, ಕೊಳ್ಳೇಗಾಲದ ರಾಚಶೆಟ್ಟಿ, ರಾಮಾಪುರದ ಸಿದ್ದರಾಜು, ಮಹಿಳಾ ಅಧ್ಯಕ್ಷೆ ಸುನಂದಾ, ಗ್ರಾಪಂ ಅಧ್ಯಕ್ಷೆ ಅರ್ಚನಾ ಇತರರು ಇದ್ದರು.