

ಹನೂರು: ಸಾಮಾಜಿಕ ಆಂದೋಲನದಲ್ಲಿ ಹಡಪದ ಅಪ್ಪಣ್ಣ ಅವರ ಕೊಡುಗೆ ಅಪಾರ. ಇವರ ಕಾಯಕ ನಿಷ್ಠೆ ಉತ್ತಮ ಸಮಾಜಕ್ಕೆ ದಾರಿದೀಪ ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಅಚರಣೆ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ದೇಶದ ಇತಿಹಾಸವನ್ನು ಅವಲೋಕಿಸಿದಾಗ ಶಿವಶರಣರು ಬೋಧನೆ, ವಚನ ಹಾಗೂ ಅಧ್ಯಾತ್ಮಿಕತೆ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಇದರಲ್ಲಿ ಹಡಪದ ಹಪ್ಪಣ್ಣ ಅವರು ಒಬ್ಬರು. ಇವರು ಬಸವಣ್ಣ ಅವರಿಗೆ ತಾಂಬೂಲ ತಯಾರು ಮಾಡುವ ಕಾಯಕ ನಿರ್ವಹಿಸುತ್ತಿದ್ದು, ಅನುಭವ ಮಂಟಪದ ಕಾರ್ಯದರ್ಶಿಯಾಗಿದ್ದರು. 12ನೇ ಶತಮಾನದ ವಚನ ಚಳವಳಿ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದರು. ಸುಮಾರು 200ಕ್ಕೂ ವಚನಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಶರಣರಿಗೆ ಇರಬೇಕಾದ ಕಾಯಕನಿಷ್ಠೆ, ಭಕ್ತಿ, ಆಚಾರ, ವಿಚಾರಗಳನ್ನು ವಚನಗಳಲ್ಲಿ ಸಾಹಿತ್ಯೀಕರಿಸಿದ್ದು, ಸಮಾಜದಲ್ಲಿದ್ದ ಮೌಢ್ಯ ಹೋಗಲಾಡಿಸಲು ಪಣ ತೊಟ್ಟಿದ್ದರು. ಹಾಗಾಗಿ ಇವರ ಆದರ್ಶ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಎಲ್ಲ ವರ್ಗಕ್ಕೂ ಸ್ಫೂರ್ತಿದಾಯಕವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಕಾಯಕನಿಷ್ಠೆ ಮೆರೆಯಬೇಕು. ಜೀವನದಲ್ಲಿ ಉನ್ನತಿ ಹೊಂದಬೇಕು ಎಂದು ಸಲಹೆ ನೀಡಿದರು.
ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಪಾಂಡು, ಮಾಜಿ ಅಧ್ಯಕ್ಷ ರಾಜು, ಶಿರಸ್ತೇದಾರ್ ನಾಗೇಂದ್ರ, ಆರ್‌ಐ ಶೇಷಣ್ಣ, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಗ್ರಾಮ ಆಡಳಿತ ಅಧಿಕಾರಿಗಳಾದ ನಾಗನಂದಿನಿ, ಶ್ರುತಿ, ವಿದ್ಯಾ, ಆಸ್ಮಾ, ಹೇಮಾ, ಶಕ್ತಿವೇಲು, ಮುಖಂಡರಾದ ವೆಂಕಟೇಶ್, ಮಂಜು, ಗುರು, ರವಿ ಇದ್ದರು.