ಕ್ಷೇತ್ರದ ಜನತೆಯ ಪ್ರೀತಿಗೆ ಬೆಲೆ ಕಟ್ಟಲಾಗದು

8-pnp 1
Published on

ಪಾಂಡವಪುರ: ಕ್ಷೇತ್ರದ ಜನತೆಯ ಪ್ರೀತಿ, ವಿಶ್ವಾಸ ಮತ್ತು ಅಭಿಮಾನಕ್ಕೆ ಎಂದೂ ಬೆಲೆ ಕಟ್ಟಲಾಗದು. ಶಾಸಕನನ್ನಾಗಿ ಕ್ಷೇತ್ರದ ಮತದಾರರ ಋಣ ತೀರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದರು.


ತಮ್ಮ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ರೈತಸಂಘ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಮತ್ತು ಸನ್ಮಾನ ಕಾರ್ಯಕ್ರಮಗಳಲ್ಲಿ ಮಾತನಾಡಿದರು.


ಶಾಸಕನಾಗಿ ಆಯ್ಕೆಯಾದ ಮೇಲೆ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವಾಗಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿಸಲು ಶಕ್ತಿಮೀರಿ ದುಡಿಯುತ್ತೇನೆ. ಈಗಾಗಲೇ ಆ ದಿಸೆಯಲ್ಲಿ ಕಾರ್ಯಪ್ರವೃತರಾಗಿದ್ದೇನೆ. ಜನರಿಗೆ ಪ್ರಮುಖವಾಗಿ ಅವಶ್ಯಕವಾಗಿರುವ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಆರ್ಥಿಕ ಸ್ವಾವಲಂಬನೆ ಇನ್ನಿತರ ವಿಚಾರಗಳಿಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುವುದಾಗಿ ಹೇಳಿದರು.


ತಾಲೂಕಿನ ಜಕ್ಕನಹಳ್ಳಿ ಸೇರಿದಂತೆ ಅಗತ್ಯವಿರುವ ಕಡೆಗಳಲ್ಲಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ತೆರೆಯಲು ಸಚಿವ ಚಲುವರಾಯಸ್ವಾಮಿ ಅವರೊಂದಿಗೆ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಚರ್ಚಿಸಲಾಗಿದೆ. ಕೆಲವು ತಾಂತ್ರಿಕ ದೋಷಗಳಿಂದ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಶೀಘ್ರವೇ ಎಲ್ಲವನ್ನು ಸರಿಪಡಿಸಿ ಆಸ್ಪತ್ರೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಜಕ್ಕನಹಳ್ಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದು, ವಾಹನ ಸಂಚಾರ ದಟ್ಟಣೆಯಾಗಿರುವ ಕಾರಣ ಮೊದಲ ಆದ್ಯತೆಯಾಗಿ ಆಸ್ಪತ್ರೆ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ಬೆಳಗ್ಗೆಯಿಂದ ರಾತ್ರಿವರೆಗೂ ಕಾರ್ಯಕರ್ತರು ಮತ್ತು ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಾಗಿಯಾಗಿ ಕಾರ್ಯಕರ್ತರಿಂದ ಅಭಿಮಾನದ ಸನ್ಮಾನ ಸ್ವೀಕರಿಸಿದರು. ತಾಲೂಕಿನ ಕ್ಯಾತನಹಳ್ಳಿ, ಹಾಗನಹಳ್ಳಿ, ಪಟ್ಟಣದ ಐದು ದೀಪ ವೃತ್ತ, ಡಾ.ರಾಜ್‌ಕುಮಾರ್ ವೃತ್ತ, ಉಪವಿಭಾಗೀಯ ಆಸ್ಪತ್ರೆ, ಮಹದೇಶ್ವರಪುರ, ಮೇಲುಕೋಟೆ, ಸುಂಕಾತೊಣ್ಣೂರು, ಚಿಕ್ಕಮರಳಿ, ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇವುಕಲ್ಲು, ಹೊಳಲು ಮತ್ತು ಅಗಟಹಳ್ಳಿ ವ್ಯಾಪ್ತಿಯಲ್ಲಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.


ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪಟ್ಟಣದ ಕಸಾಪ ಭವನದಲ್ಲಿ ರಕ್ತದಾನ ಶಿಬಿರ ಹಾಗೂ ಪಾಂಡವಪುರ ಉಪವಿಭಾಗೀಯ ಅಸ್ಪತ್ರೆಯ ಡಿ ಗ್ರೂಪ್ ಮತ್ತು ನಾನ್ ಕ್ಲಿನಿಕಲ್ ನೌಕರರು ಹಾಗೂ ವೈದ್ಯರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಮೇಲುಕೋಟೆ ಚಲುನಾರಾಯಣಸ್ವಾಮಿ, ಜಕ್ಕನಹಳ್ಳಿ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಿ ಶಾಸಕರ ಯಶಸ್ಸಿಗೆ ಪ್ರಾರ್ಥಿಸಲಾಯಿತು. ಕ್ಷೇತ್ರದ ಕೆಲವೆಡೆ ಕ್ರೇನ್ ಮೂಲಕ ಸೇಬು, ಕಿತ್ತಾಳೆ ಬೃಹತ್ ಹಾರಗಳನ್ನು ಹಾಕಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.


ಈ ವೇಳೆ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ಮುಖಂಡರಾದ ರಾಘು, ಪರಮೇಶ್‌ಗೌಡ, ಚಿಕ್ಕಾಡೆ ಸಿ.ಎನ್.ವಿಜೇಂದ್ರ, ಹಾರೋಹಳ್ಳಿ ರಾಮಕೃಷ್ಣೇಗೌಡ, ಲಕ್ಷ್ಮೇಗೌಡ, ವಕೀಲ ಮುರಳಿ, ಬೇವಿನಕುಪ್ಪೆ ಅನಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net