ಹಲ್ಲೆ ಖಂಡಿಸಿ ಸೋಲಿಗರ ಪ್ರತಿಭಟನೆ

27 HANUR 2
ಮೆಂದಾರೆ ಗ್ರಾಮದ ಗಿರಿಜನರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಹದೇಶ್ವರ ಬೆಟ್ಟದಲ್ಲಿ ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
Published on

ಹನೂರು: ತಾಲೂಕಿನ ಇಂಡಿಗನತ್ತ ಮತಗಟ್ಟೆಯಲ್ಲಿ ಮೆಂದಾರೆ ಗ್ರಾಮದ ಗಿರಿಜನರ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶನಿವಾರ ತಾಲೂಕು ಸೋಲಿಗ ಅಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಮ.ಬೆಟ್ಟದಲ್ಲಿ ಸಭೆ ನಡೆಸಿ ನಿರ್ಧರಿಸಿದ ಸೋಲಿಗ ಮುಖಂಡರು ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಪೊಲೀಸ್ ಠಾಣೆಯ ಮುಂಭಾಗಕ್ಕೆ ತೆರಳಿ ಎಎಸ್ಪಿ ಉದೇಶ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸೋಲಿಗ ಮುಖಂಡರು ಮಾತನಾಡಿ, ಇಂಡಿಗನತ್ತ ಗ್ರಾಮದಲ್ಲಿ ಶುಕ್ರವಾರ ಚುನಾವಣೆ ಬಹಿಷ್ಕಾರದ ಹಿನ್ನೆಲೆಯಲ್ಲಿ ಮತಗಟ್ಟೆಗೆ ಮತ ಚಲಾಯಿಸಲು ಮತದಾರರು ಆಗಮಿಸಲಿಲ್ಲ. ಇದರಿಂದ ಅಧಿಕಾರಿಗಳ ತಂಡ ಮೆಂದಾರೆ ಗ್ರಾಮಕ್ಕೆ ಭೇಟಿ ನೀಡಿ ಮತ ಚಲಾಯಿಸುವಂತೆ ಗಿರಿಜನರನ್ನು ಮನವಿ ಮಾಡಿದಾಗ ಸುಮಾರು 50 ಜನರು ಮತಗಟ್ಟೆಗೆ ತೆರಳಿದ್ದರು. ಇದರಿಂದ ಉದ್ರೇಕಗೊಂಡ ಗಿರಿಜನರೇತರು ಜಾತಿ ನಿಂದನೆ ಮಾತುಗಳನ್ನು ಆಡುತ್ತಾ ಮತ ಹಾಕದಂತೆ ಗಿರಿಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದು, ಮಗು ಸೇರಿದಂತೆ ಮಾದಯ್ಯ, ಶಿವಕುಮಾರ್ ಹಾಗೂ ಸಣ್ಣಪ್ಪಿ ಗಾಯಗೊಂಡಿದ್ದಾರೆ. ಇದರಿಂದ ಅಂಗವಿಕಲತೆ ಉಂಟಾಗುವ ಸಾಧ್ಯತೆ ಇದೆ. ಘಟನೆಯಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಮನೆ ಮಾಡಿದೆ. ಆದ್ದರಿಂದ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕು. ಎಸ್ಸಿ, ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಎಎಸ್ಪಿ ಉದೇಶ್ ಅವರು ಈ ಬಗ್ಗೆ ಅಗತ್ಯ ಕ್ರಮ ವಹಿಸುದಾಗಿ ಭರವಸೆ ನೀಡಿದರು. ರಾಜ್ಯ ಆದಿವಾಸಿ ಬುಡಕಟ್ಟು ಜನರ ವೇದಿಕೆ ಕಾರ್ಯದರ್ಶಿ ಮುತ್ತಯ್ಯ, ಜಿಲ್ಲಾ ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ರಂಗೇಗೌಡ, ಕಾರ್ಯದರ್ಶಿ ಮಾದೇಗೌಡ, ತಾಲೂಕು ಸಂಘದ ಅಧ್ಯಕ್ಷ ದೊಡ್ಡಸಿದ್ದಯ್ಯ, ಕಾರ್ಯದರ್ಶಿ ರಂಗೇಗೌಡ ಲ್ಯಾಂಪ್ಸ್ ಸೊಸೈಟಿ ಉಪಾಧ್ಯಕ್ಷ ಚಂದ್ರಪ್ಪ, ಮುಖಂಡರಾದ ಗಿರಿಯಾ, ಭದ್ರಪ್ಪ, ಬಸವರಾಜು ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net