

ಕಾರವಾರ: ಕಾಳಿ ನದಿಯ ಹಳೆಯ ಸೇತುವೆ ಕುಸಿತವಾಗಿದ್ದರಿಂದ ನೀರಿಗೆ ಬಿದ್ದ ತಮಿಳುನಾಡು ಮೂಲದ ಲಾರಿಯನ್ನು ಎರಡು ದಿನಗಳ ಕಾರ್ಯಾಚರಣೆಯ ಬಳಿಕ ಗುರುವಾರ ರಾತ್ರಿ ದಡಕ್ಕೆ ಎಳೆತರಲಾಯಿತು. ಐಆರ್‌ಬಿಯಿಂದ ಗುತ್ತಿಗೆ ಪಡೆದ ಯಲ್ಲಾಪುರದ ಕ್ರೇನ್‌ಗಳು, ಅವುಗಳ ನಿರ್ವಾಹಕರು ಮತ್ತು ಕಾರ್ಮಿಕರು ಕಾರ್ಯಾಚರಣೆ ನಡೆಸಿದ್ದು, ಮುಳುಗು ತಜ್ಞ ಈಶ್ವರ ಮಲ್ಪೆ ತಂಡದ ಸದಸ್ಯರು, ಮೀನುಗಾರರು ಸಹಕಾರ ನೀಡಿದರು.
ಸೇತುವೆಗುಂಟ ಅಳವಡಿಸಲಾಗಿದ್ದ ವಿದ್ಯುತ್ ಕೇಬಲ್ ಕೂಡ ಬ್ರಿಜ್ ಜತೆಗೇ ನೀರಿಗೆ ಬಿದ್ದಿದೆ. ಆದರೆ, ತುಂಡಾಗಿರಲಿಲ್ಲ. ಅದಕ್ಕೆ ಲಾರಿಯ ಭಾಗ ಸಿಕ್ಕಿಹಾಕಿಕೊಂಡಿತ್ತು. ಅದರ ಆಧಾರದ ಮೇಲೆ ಕ್ಯಾಬಿನ್ ನೀರಿನ ಮೇಲೆ ತೋರುತ್ತಿತ್ತು. ಗುರುವಾರ ವಿದ್ಯುತ್ ಕೇಬಲ್ ತುಂಡು ಮಾಡಿದ ತಕ್ಷಣ ಲಾರಿ ನೀರಿನಲ್ಲಿ ಸಂಪೂರ್ಣ ಮುಳುಗಿತು. ಈಶ್ವರ ಮಲ್ಪೆ ತಂಡವು ನೀರಿನಾಳಕ್ಕೆ ಹೋಗಿ ಉಕ್ಕಿನ ಮೂರು ಕೇಬಲ್‌ಗಳನ್ನು ಲಾರಿಯ ಭಾಗಕ್ಕೆ ಕಟ್ಟಿತು. ನಂತರ 300 ಮೀಟರ್ ದೂರದಲ್ಲಿ ಅಳಿವೆವಾಡ ದಂಡೆಯ ಮೇಲೆ ನಿಂತ 4 ಕ್ರೇನ್‌ಗಳ ಮೂಲಕ ಲಾರಿಯನ್ನು ದಡದೆಡೆಗೆ ನಿಧಾನಕ್ಕೆ ಎಳೆತರಲಾಯಿತು.
ಆಗಸ್ಟ್ 6 ರ ರಾತ್ರಿ ಬ್ರಿಜ್ ಕುಸಿದಿತ್ತು. ಅದರ ಮೇಲೆ ತೆರಳುತ್ತಿದ್ದ ಲಾರಿಯೂ ನೀರಿಗೆ ಬಿದ್ದಿತ್ತು. ಲಾರಿ ಗೋವಾದಿಂದ ಹುಬ್ಬಳ್ಳಿಗೆ ತೆರಳುತ್ತಿತ್ತು. ಚಾಲಕ ಲಾರಿಯ ಮೇಲೆ ನಿಂತು ಜೀವ ಉಳಿಸಿಕೊಂಡಿದ್ದ. ಲಾರಿಯನ್ನು ನೀರಿನಿಂದ ತೆಗೆದು, ಇನ್ಶುರೆನ್ಸ್ ಹಣವಾದರೂ ಸಿಗುವಂತೆ ಮಾಡಬೇಕು ಎಂದು ಲಾರಿಯ ಮಾಲೀಕನ ಒತ್ತಾಯವಾಗಿತ್ತು. ಆದರೆ, ಕಾರ್ಯಾಚರಣೆ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಲೀಕ ಸೇಂಥಿಲ್ ಕುಸಿದ ಬ್ರಿಜ್‌ನಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಬುಧವಾರ ಐಆರ್‌ಬಿ ಕಾರ್ಯಾಚರಣೆ ಪ್ರಾರಂಭಿಸಿತ್ತು. ಲಾರಿ ಸುಮಾರು 7.5 ಟನ್ ಭಾರವಿದ್ದು, ದಡಕ್ಕೆ ಎಳೆಯುವುದು ಸವಾಲಾಗಿತ್ತು.
ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಡಿಸಿ, ಎಸ್‌ಪಿ, ಕೂಡ ಆಗಮಿಸಿ ಕಾರ್ಯಾಚರಣೆ ವೀಕ್ಷಿಸಿದರು. ಸ್ಥಳೀಯ ಸಾವಿರಾರು ಜನರು ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸಿದರು. ಕರಾವಳಿ ಕಾವಲು ಪಡೆ ಹಾಗೂ ಸ್ಥಳೀಯ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಲಾರಿಯನ್ನು ಇನ್ಶುರೆನ್ಸ್ ಕಂಪನಿಗೆ ಹಸ್ತಾಂತರಿಸುವುದಾಗಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಶಿರೂರಿನಲ್ಲಿ ಇಂದು ಕಾರ್ಯಾಚರಣೆ
ಶಿರೂರಿನಲ್ಲಿ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆದಿರಲಿಲ್ಲ. ಅಲ್ಲಿ ಹುಡುಕಾಟ ನಡೆಸಿದ್ದ ಮುಳುಗು ತಜ್ಞ ಈಶ್ವ ಮಲ್ಪೆ ಕಾರವಾರ ಕಾಳಿ ನದಿಗೆ ಆಗಮಿಸಿ ಕಾರ್ಯಾಚರಿಸಿದರು. ಆ.16 ರಿಂದ ಮತ್ತೆ ಕಾರ್ಯಾಚರಣೆ ಮುಂದುವರಿಯಲಿದ್ದು, ಭಾರತೀಯ ನೌಕಾಸೇನೆಯ ಅಽಕಾರಿಗಳೂ ಪಾಲ್ಗೊಳ್ಳುವರು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಎಸ್‌ಪಿ ಮನೆಗೆ ಶ್ವಾನಗಳು
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಕಣ್ಮರೆಯಾದ ಚಹಾ ಅಂಗಡಿಯ ಮಾಲೀಕ ಲಕ್ಷ್ಮಣ ನಾಯ್ಕ ಮನೆಯಲ್ಲಿ ಇರುತ್ತಿದ್ದ ಎರಡು ನಾಯಿಗಳನ್ನು ಎಸ್‌ಪಿ ಎಂ.ನಾರಾಯಣ ದತ್ತು ಪಡೆದರು. ದುರ್ಘಟನೆ ನಡೆದ ದಿನದಿಂದ ಅವುಗಳು ಸ್ಥಳದಲ್ಲೇ ಸುತ್ತಾಡುತ್ತಿದ್ದವು. ಮಾಲೀಕನಿಗಾಗಿ ಹುಡುಕಾಟ ನಡೆಸುತ್ತಿದ್ದವು. ಘಟನೆ ನಡೆದು ತಿಂಗಳು ಕಳೆದರೂ ಅವು ಸ್ಥಳ ಬಿಟ್ಟು ಕದಲಿಲ್ಲ. ಸರಿಯಾಗಿ ಊಟಕ್ಕಿಲ್ಲ ಎಂದು ಊರು ಬಿಟ್ಟು ಹೋಗಿಲ್ಲ. ಶ್ವಾನಗಳ ಈ ನಂಬಿಕೆ ನೋಡಿದ ಎಸ್‌ಪಿ ಎಂ.ನಾರಾಯಣ ಅವುಗಳನ್ನು ತಮ್ಮ ನಿವಾಸಕ್ಕೆ ಬುಧವಾರ ಕೊಂಡೊಯ್ದರು. ಅದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.