ಸಿಟ್ಟಿನ ಕೈಗೆ ಬುದ್ದಿಕೊಟ್ಟ ಲಾರಿ ಚಾಲಕ ಸೆರೆ

arrest
Published on

ನರಗುಂದ: ಕಳೆದ ಏ.5ರಂದು ಸಂಭವಿಸಿದ ಅಪಘಾತ ಪ್ರಕರಣ ಬೇಧಿಸಿರುವ ಪೊಲೀಸರು, ಉತ್ತರ ಪ್ರದೇಶ ಮೂಲದ ಲಾರಿ ಚಾಲಕನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಪಘಾತದಲ್ಲಿ ಒಬ್ಬ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದ.

ಏನಿದು ಘಟನೆ?

ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ಶಿವಾನಂದ ಚಲವಾದಿ, ನವನಗರದ ನಿವಾಸಿ ಸದ್ಧಾಂ ಕಡಿವಾಳ ಎಂಬುವರು ಏ.5 ರಂದು ಹುಬ್ಬಳ್ಳಿಯಿಂದ ಬೈಕ್‌ನಲ್ಲಿ ಬಾಗಲಕೋಟೆಗೆ ತೆರಳುತ್ತಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಭೈರನಹಟ್ಟಿ ಸಮೀಪದ ಢಾಬಾವೊಂದಕ್ಕೆ ಊಟಕ್ಕೆ ತೆರಳಿದ್ದರು. ಈ ವೇಳೆ ಢಾಬಾದ ಮಾಲೀಕರೊಂದಿಗೆ ಬಂಧಿತ ಆರೋಪಿ ಜಗಳಕ್ಕಿಳಿದಿದ್ದ. ‘ಎಲ್ಲರಿಗೂ ಊಟ ಕೊಡುತ್ತಿದ್ದೀಯಾ. ನನಗೇಕೆ ಕೊಡುತ್ತಿಲ್ಲ? ಎಂದು ಪ್ರಶ್ನಿಸಿದ್ದಲ್ಲದೆ, ಅವಾಚ್ಯ ಪದಗಳಿಂದ ನಿಂದಿಸತೊಡಗಿದ್ದ. ಆಗ ಶಿವಾನಂದ ಹಾಗೂ ಸದ್ಧಾಂ ಲಾರಿ ಚಾಲಕನಿಗೆ ಬುದ್ಧಿವಾದ ಹೇಳಿದ್ದಕ್ಕೆ ಅವರೊಂದಿಗೂ ಜಗಳಕ್ಕೆ ಇಳಿದಿದ್ದಾನೆ. ಇದರಿಂದ ಆಕ್ರೋಶಗೊಂಡ ಬೈಕ್ ಸವಾರರಿಬ್ಬರೂ ಲಾರಿ ಚಾಲಕನಿಗೆ ಧರ್ಮದೇಟು ನೀಡಿದ್ದರು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ಲಾರಿ ಚಾಲಕ, ಇಬ್ಬರು ಢಾಬಾದಿಂದ ಹೊರಗೆ ಬರುವುದನ್ನು ಕಾಯುತ್ತ ಕುಳಿತಿದ್ದ. ಇಬ್ಬರೂ ಊಟ ಮುಗಿಸಿ ಪುನಃ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದ್ದಾರೆ. ಚಾಲಕ ಇವರನ್ನು ಹಿಂಬಾಲಿಸಿದ್ದಾನೆ.

ಈ ವೇಳೆ ಅಕಾಲಿಕ ಮಳೆ ಬಂದಿದ್ದರಿಂದ ರಡ್ಡೇರ ನಾಗನೂರ ಕ್ರಾಸ್ ಬಳಿ ನಿಂತಿದ್ದ ಬೈಕ್ ಸವಾರರ ಮೇಲೆ ಲಾರಿ ಹಾಯಿಸಿ ಪರಾರಿಯಾಗಿದ್ದ. ಪ್ರಾರಂಭದಲ್ಲಿ ಪೊಲೀಸರು ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸದ್ಧಾಂ ನೀಡಿದ ಹೇಳಿಕೆಯಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

ಲಾರಿ ಚಾಲಕನ ಪತ್ತೆಗಾಗಿ ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್‌ಐ ಎಫ್.ಎಸ್.ಮಣ್ಣೂರ, ಎಎಸ್‌ಐ ಎಸ್.ಎಸ್.ಕಾಶಪ್ಪಯ್ಯನಮಠ, ಪೇದೆಗಳಾದ ದುರ್ಗಾಪ್ರಸಾದ, ಮಂಜು ಮಾದರ, ಚಂದ್ರು ಕಾಕನೂರ, ನೀಲಪ್ಪ ಬಾರಕೇರ ನೇತೃತ್ವದಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಢಾಬಾದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಹೊಡೆದಾಟದ ದೃಶ್ಯಾವಳಿಗಳನ್ನು ಪರಿಗಣಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಸಿಪಿಐ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net