

ಲಿಂಗಸುಗೂರು: ಶ್ರಾವಣ ಮಾಸದ ಮೂರನೇ ಸೋಮವಾರ ಶ್ರೀ ಕ್ಷೇತ್ರ ಅಮರೇಶ್ವರ ಉತ್ಸವ ಮೂರ್ತಿ, ಕಳಸದೊಂದಿಗೆ ಕೃಷ್ಣಾ ನದಿಯ ಬ್ರಹ್ಮ ಕೊಂಡದಲ್ಲಿ ಸ್ನಾನ, ಪೂಜೆ ನೆರವೇರಿಸಿ ಕರುಣಾ ಪ್ರಸಾದವನ್ನು ಗುರು ಗಜದಂಡ ಶ್ರೀಗಳು ನೀಡಿದರು.
ನೂರಾರು ವರ್ಷಗಳ ಹಿಂದೆ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಬ್ರಹ್ಮರಾಕ್ಷಸ ನೆಲೆಸಿತ್ತು. ಭಕ್ತರಿಗೆ ದೇವರ ದರ್ಶನ ಮಾಡಲು ತೊಂದರೆ ಕೊಡುತ್ತಿತ್ತು. ಈ ಕುರಿತು ಭಕ್ತರು ಆಗಿನ ಗುರು ಗಜದಂಡ ಸ್ವಾಮಿಗಳ ಹತ್ತಿರ ಬಂದು ತಿಳಿಸಿದ್ದರು.
ಆಗ ಸ್ವಾಮಿಗಳು ಬ್ರಹ್ಮರಾಕ್ಷಸನನ್ನು ಕರೆದು ದೂರದ ಕೃಷ್ಣಾ ತೀರದಲ್ಲಿ ನೆಲೆಸುವಂತೆ ತಿಳಿಸಿದ್ದರು. ನಿಮ್ಮ ಪಾದ ಸೇವೆ, ದರ್ಶನ, ಕರುಣಾ ಪ್ರಸಾದ ನೀಡುವಂತೆ ಬ್ರಹ್ಮರಾಕ್ಷಸ ಶ್ರೀಗಳಿಗೆ ಕೇಳಿಕೊಂಡಿತು.
ಪ್ರತಿ ಶ್ರಾವಣ ಮಾಸದ ಮೂರನೇ ಸೋಮವಾರ ದರ್ಶನ ನೀಡಿ ಕರುಣಾ ಪ್ರಸಾದ ನೀಡುವುದಾಗಿ ಶ್ರೀಗಳು ತಿಳಿಸಿದ್ದರೆಂದು ಪ್ರತೀತಿ ಇದೆ. ಅದರಂತೆ ಸೋಮವಾರ ಕೃಷ್ಣಾ ನದಿ ತೀರದಲ್ಲಿ ಶ್ರೀಗಳು ದರ್ಶನ ನೀಡಿ ಕರುಣಾ ಪ್ರಸಾದ ಸಲ್ಲಿಸಿದರು.