ಇಲಾಖೆಯ ಲೋಪದೋಷ ತನಿಖೆಯಾಗಲಿದೆ

12 NMG 03 (2)
ನಾಗಮಂಗಲ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದ ಕೋಮು ಗಲಭೆ ಸ್ಥಳಕ್ಕೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್.ಇತೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾಧಿಕಾರಿ ಡಾ.ಕುಮಾರ ಇದ್ದರು.
Published on

ನಾಗಮಂಗಲ: ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಸಂದರ್ಭ ಎರಡು ಕೋಮುಗಳ ನಡುವೆ ಗಲಭೆ ನಡೆದಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಈ ಘಟನೆಯಲ್ಲಿ ನಮ್ಮ ಇಲಾಖೆಯ ಲೋಪದೋಷಗಳಿರಬಹುದು, ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ತಿಳಿಸಿದರು.


ಪಟ್ಟಣದಲ್ಲಿ ಗಲಭೆ ನಡೆದ ಸ್ಥಳಗಳಿಗೆ ಬುಧವಾರ ಮಧ್ಯರಾತ್ರಿ ಭೇಟಿ ನೀಡಿ, ದಕ್ಷಿಣ ವಲಯ ಡಿಐಜಿ ಬೋರಲಿಂಗಯ್ಯ ಮತ್ತು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರಿಂದ ಮಾಹಿತಿ ಪಡೆದು ಸುದ್ದಿಗಾರರೊಂದಿಗೆೆ ಮಾತನಾಡಿದರು.
ಗಣೇಶ ವಿಸರ್ಜನೆ ಮಾಡುವ ಸಂದರ್ಭ ಎರಡೂ ಕೋಮುಗಳ ನಡುವೆ ಗಲಭೆ ನಡೆದಿದೆ. ಈ ಸಂದರ್ಭ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ರೀತಿಯ ಗಲಭೆಗಳಾದ ಸಂದರ್ಭದಲ್ಲಿ ಜನರು ಆತಂಕಕ್ಕೀಡಾಗುವುದು ಸಹಜ. ಆದ್ದರಿಂದ ಪೊಲೀಸರು ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಈ ಗಲಭೆಯ ವಿಡಿಯೋಗಳು ನಮಗೆ ಸಿಕ್ಕಿದ್ದು, ಅದರಲ್ಲಿ ಪಾಲ್ಗೊಂಡಿರುವವರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲು ತಂಡಗಳನ್ನು ರಚಿಸಲಾಗಿದೆ ಎಂದರು.
ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ. ಆರೋಪಿಗಳನ್ನು ಪತ್ತೆಹಚ್ಚಿ ಕೆಲವರನ್ನು ವಶಕ್ಕೆ ಪಡೆದಿದ್ದೇವೆ. ಯಾರೂ ಆತಂಕಕ್ಕೊಳಗಾಗದೆ ಅವರ ಧಾರ್ಮಿಕ ಹಬ್ಬಗಳನ್ನು ಸಂತೋಷದಿಂದ ಆಚರಿಸಲಿ. ನಮ್ಮ ಸಿಬ್ಬಂದಿಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಪೂರ್ವನಿಯೋಜಿತ ಘಟನೆಯೋ ಅಥವಾ ಆಕಸ್ಮಿಕವಾಗಿ ನಡೆದಿದೆಯೋ ಎಂಬುದು ತನಿಖೆಯ ನಂತರ ತಿಳಿಯಲಿದೆ. ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರು ಕ್ರಮ ಜರುಗಿಸಲಾಗುವುದು. ಆದ್ದರಿಂದಲೇ ನಾನೇ ಖುದ್ದು ಭೇಟಿ ನೀಡಿ, ಮಾಹಿತಿ ಪಡೆಯುತ್ತಿದ್ದೇನೆ ಎಂದರು.

ನಂತರ ಪಟ್ಟಣದಲ್ಲಿಯೇ ಮೊಕ್ಕಾಂ ಹೂಡಿ ಹಲವು ಬಾರಿ ಪಟ್ಟಣವನ್ನು ವೀಕ್ಷಿಸಿ ಪರಿಸ್ಥಿತಿ ಅವಲೋಕಿಸಿದರು. ಈ ಸಂದರ್ಭ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾಧಿಕಾರಿ ಡಾ.ಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net