ಭಾನುವಾರ ಮಾತ್ರ ಲಾಕ್‌ಡೌನ್ ಹಾಸ್ಯಾಸ್ಪದ

druva
Published on

ಮೈಸೂರು: ರಾಜ್ಯದಲ್ಲಿ ಲಾಕ್‌ಡೌನ್ ಅನ್ನು ಸಂಪೂರ್ಣ ಸಡಿಲ ಮಾಡಿ ಭಾನುವಾರ ಮಾತ್ರ ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವುದು ಹಾಸ್ಯಾಸ್ಪದ ನಿರ್ಧಾರ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಸರ್ಕಾರವನ್ನು ಟೀಕಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗಡಿಗಳಲ್ಲಿ ತಪಾಸಣಾ ಕಾರ್ಯಗಳಿಗೆ ಕೇವಲ ಪೊಲೀಸರನ್ನು ಮಾತ್ರ ನಿಯೋಜನೆ ಮಾಡಲಾಗಿದ್ದು, ಇವರ ಜತೆಗೆ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಿ ತಪಾಸಣೆ ನಡೆಸಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಎಚ್ಚರಿಸಿದರು.

ಮಹಾರಾಷ್ಟ್ರದಿಂದ ಆಗಮಿಸುತ್ತಿರುವವರಲ್ಲಿ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ಗಡಿಗಳಲ್ಲಿ ತಪಾಸಣೆ ನಂತರವಷ್ಟೇ ಹೊರ ರಾಜ್ಯದಿಂದ ಬರುವವರನ್ನು ರಾಜ್ಯದೊಳಗೆ ಬಿಟ್ಟುಕೊಳ್ಳಬೇಕು. ಮೊದಲೇ ಎಚ್ಚೆತ್ತುಕೊಂಡು ವಿದೇಶದಿಂದ ಆಗಮಿಸಿದವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿ ಕ್ವಾರಂಟೈನ್‌ಗೆ ಒಳಪಡಿಸಿದ್ದರೆ ದೇಶದಲ್ಲಿ ಸೋಂಕು ಕಾಣಿಸಿಕೊಳ್ಳುವ ಯಾವುದೇ ಸಾಧ್ಯತೆ ಇರಲಿಲ್ಲ ಎಂದರು.


ದಕ್ಷಿಣ ಕೊರಿಯಾ ಹಾಗೂ ಇತರ ದೇಶಗಳಲ್ಲಿ ಈಗಲೂ ಲಾಕ್‌ಡೌನ್ ಮಾಡಿಲ್ಲ. ಅವರು ಚೀನಾದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಆರಂಭಿಸಿ ಕ್ವಾರಂಟೈನ್ ಕೇಂದ್ರ ಪ್ರಾರಂಭಿಸಿದರು. ಹೀಗಾಗಿ ದಕ್ಷಿಣ ಕೊರಿಯಾದಲ್ಲಿ ಎಲ್ಲ ಚಟುವಟಿಕೆಗಳು ನಡೆಯುತ್ತಿದೆ. ಈ ವಿಚಾರ ಅರಿಯದ ಬಿಜೆಪಿ ಸರ್ಕಾರ, ದೇಶವ್ಯಾಪಿ ಸೋಂಕು ಹೆಚ್ಚಾದ ಸಂದರ್ಭ ಲಾಕ್‌ಡೌನ್ ಸಡಿಲ ಮಾಡಿ ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿ ಮಾಡಿದೆ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿ ರೂಪಿಸಿದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಆಫ್ ಇಂಡಿಯಾ, ಮುದ್ರಾ ಸೇರಿ ಯಾವುದೇ ಯೋಜನೆಗಳು ಕರೊನಾ ಸಂಕಷ್ಟದಲ್ಲಿ ಉಪಯೋಗಕ್ಕೆ ಬರಲಿಲ್ಲ ಹಾಗೂ ಬಡವರ ಕೈ ಹಿಡಿಯಲಿಲ್ಲ. ಏಕೆಂದರೆ ಬಡವರಿಗೋಸ್ಕರ ಮೋದಿ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ ಎಂದು ಟೀಕಿಸಿದರು.

ಪ್ರಸ್ತುತ ಎಲ್ಲ ಸಚಿವರು ಹಳ್ಳಿಗಳಿಗೆ ತೆರಳಿ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದು, ಯುಪಿಎ ಸರ್ಕಾರ ರೂಪಿಸಿದ ಯೋಜನೆಗಳೇ ಇದಕ್ಕೆ ಕಾರಣ. ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿಗೆ ತರದೆ ಹೋಗಿದ್ದರೆ ಕರೊನಾ ಸಂಕಷ್ಟ ಸಂದರ್ಭ ಜನರಿಗೆ ಉಚಿತವಾಗಿ ಪಡಿತರ ನೀಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಬೇಜವಾಬ್ದಾರಿ ಹೇಳಿಕೆ
ಜುಬಿಲೆಂಟ್ ಬಗ್ಗೆ ತನಿಖೆ ನಡೆಸಲು ಆಸಕ್ತಿ ತೋರದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಜುಬಿಲಿಂಟ್ 10 ಗ್ರಾಮಗಳನ್ನು ದತ್ತು ಪಡೆದು 50 ಸಾವಿರ ದಿನಸಿ ಕಿಟ್ ನೀಡಿದೆ ಎಂದು ಸ್ವತಃ ಸರ್ಕಾರವೇ ಹೇಳಿಕೆ ನೀಡಿದೆ. ಅದನ್ನೇ ನಾನು ಕಿಕ್‌ಬ್ಯಾಕ್ ಎಂದಿದ್ದೇನೆ. ಇದನ್ನು ಅರ್ಥ ಮಾಡಿಕೊಳ್ಳದ ಸಚಿವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಧ್ರುವನಾರಾಯಣ್ ಪ್ರಶ್ನಿಸಿದರು.

ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್‌ನಿಂದ ಸಾಕಷ್ಟು ಜನರಿಗೆ ಕರೊನಾ ಸೋಂಕು ಹರಡಿತು. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಅವರ ವಿರುದ್ಧ ಪ್ರಕರಣ ದಾಖಲಿಸಿತು. ಆದರೆ, ಮೈಸೂರಿನಲ್ಲಿ 90 ಪ್ರಕರಣಗಳ ಪೈಕಿ 74 ಪ್ರಕರಣಗಳು ಜುಬಿಲೆಂಟ್‌ಗೆ ಸೇರಿದ್ದಾ ಗಿದ್ದು, ಇನ್ನೂ ಏತಕ್ಕೆ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಜುಬಿಲೆಂಟ್ ವಿಚಾರವಾಗಿ ಶಾಸಕರುಗಳು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಅವಶ್ಯಕತೆ ಇದೆ ಎಂದರು.

ಚಾಮರಾಜನಗರದಲ್ಲಿ ಕೆಲವರು ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಜಯಂತಿ ಆಚರಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಎಸ್ಪಿ ಕಚೇರಿಗೆ ದೂರು ನೀಡಲು ತೆರಳಿದರೆ ದೂರು ಸ್ವೀಕಾರ ಮಾಡಲಿಲ್ಲ. ಆದರೆ, ಎಐಸಿಸಿ ಅಧ್ಯಕ್ಷೆ ಸೋನಿಯಗಾಂಧಿ ಕರೊನಾ ನಿಧಿ ಕುರಿತು ಲೆಕ್ಕ ಕೇಳಿದಾಗ ಅವರ ಮೇಲೆ ಪ್ರಕರಣ ದಾಖಲಿಸುತ್ತಾರೆ. ಇದು ಗೂಂಡಾ ವರ್ತನೆಯಾಗಿದೆ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net