ಅಕ್ಷರಸ್ಥರು ಶ್ರಮಜೀವಿಗಳ ಋಣದ ಮಕ್ಕಳು

7
Published on

ಮೈಸೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಸವಣ್ಣನ ಕಾಲದ ಅನುಭವ ಮಂಟಪದಂತೆ ಚರ್ಚೆ ಇರಬೇಕೇ ಹೊರತು ದೇವರಿಗೆ ಗಡಗಡ ನಡುಗುವ ಸ್ಥಿತಿ ನಿರ್ಮಾಣವಾಗಬಾರದು ಎಂದು ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಮಾರ್ಮಿಕವಾಗಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಹಿಮಾ ಪ್ರಕಾಶನ, ವಂಶಿ ಪ್ರಕಾಶನ ವತಿಯಿಂದ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಅಮ್ಮಸಂದ್ರ ಸುರೇಶ್ ಅವರ ಪತ್ರಕರ್ತ ಗಾಂಧಿ, ಶೋಷಣೆಗಳ ಅನ್ವೇಷಣೆ, ಅಸಮಾನತೆಯ ಉದಾರೀಕರಣ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ನೆಲ ಅತ್ಯಂತ ಸೂಕ್ಷ್ಮವಾದುದು. ಕರ್ನಾಟಕದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಎಲ್ಲ ಬಂದು ಹೋಗಿದ್ದಾರೆ. ಪಂಪ ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಸಂದೇಶ ನೀಡಿದ್ದಾರೆ. ಕುವೆಂಪು ವಿಶ್ವಮಾನವ ಸಂದೇಶ ನೀಡಿದ್ದಾರೆ. ಇದನ್ನೆಲ್ಲ ತಿಳಿದು ಸಮಾಜವಾದಿ ರಾಮಮನೋಹರ ಲೋಹಿಯಾ ಅವರು ತುಂಬ ಮೆಚ್ಚಿಕೊಂಡಿದ್ದರು ಎಂದು ಅವರು ಹೇಳಿದರು.

ಅಕ್ಷರಸ್ಥರು ಶ್ರಮಜೀವಿಗಳ ಋಣದ ಮಕ್ಕಳು ಎಂದು ವಿಶ್ಲೇಷಿಸಿದ ಅವರು, ವೈಜ್ಞಾನಿಕ ಚಿಂತನೆಯಲ್ಲಿ ಬುದ್ಧನಿಗೆ ಸರಿಸಾಟಿ ಮತ್ತೊಬ್ಬರಿಲ್ಲ. ಸಮಾನತೆಗೆ ಅತ್ಯುತ್ತಮ ನಿದರ್ಶನ ಬಸವಣ್ಣ. ನಾನು ಬುದ್ಧ, ಬಸವರನ್ನು ನೆನೆಯದ ಕ್ಷಣವೇ ಇಲ್ಲ ಎಂದರು.

ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ, ಶೈಕ್ಷಣಿಕವಾಗಿ ಪ್ರಬುದ್ಧವಾಗಿರುವ ಡಾ. ಅಮ್ಮಸಂದ್ರ ಸುರೇಶ್ ಅವರಿಗೂ ಜ್ಞಾನದಾಹ ಇನ್ನೂ ತೀರಿಲ್ಲ. ಸಂಗೀತ ವಿವಿಯಲ್ಲಿ ಡಿ.ಲಿಟ್‌ಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಹಲವಾರು ಕೃತಿಗಳ ರಚನೆಯಲ್ಲಿ ನಿರತರಾಗಿದ್ದಾರೆ ಎಂದರು.

ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್. ನರೇಂದ್ರ ಕುಮಾರ್, ಹಿರಿಯ ಪ್ರಾಧ್ಯಾಪಕ ಚಿನ್ನಸ್ವಾಮಿ ಎಂ. ಸೋಸಲೆ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕಸಾಪ ನಗರಾಧ್ಯಕ್ಷ ಕೆ.ಎಸ್. ಶಿವರಾಂ, ಪ್ರಕಾಶಾಕ ಮಾಹಿಮಾ ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net