ಬೂಕರ್ ಪ್ರಶಸ್ತಿ ಮೂಲಕ ಸಾಹಿತ್ಯ ಲೋಕ ವಿಜೃಂಭಿಸುತ್ತಿದೆ: ಡಾ.ಮಂತರ್ ಗೌಡ

sanmana deepa basthi
Published on

ಮಡಿಕೇರಿ: ಹಾರ್ಟ್ ಲ್ಯಾಂಪ್ ಆಂಗ್ಲ ಅನುವಾದಿತ ಕೃತಿಯ ಮೂಲಕ ಕನ್ನಡ ಸಾಹಿತ್ಯಿದ ಅಂತಃಶಕ್ತಿಯನ್ನು ವಿಶ್ವದ ಉದ್ದಗಲಕ್ಕೂ ಪಸರಿಸಿ ಬೂಕರ್ ಪ್ರಶಸ್ತಿಯ ಹಿರಿಮೆಯ ಗರಿಯನ್ನು ತಮ್ಮ ಮಡಿಗೇರಿಸಿಕೊಂಡ ಕೊಡಗಿನ ಕುವರಿ ದೀಪಾಭಾಸ್ತಿ ಅವರಿಗೆ ಕೊಡಗು ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಆಯೋಜಿತ ಅಭಿವಂದನಾ ದೀಪಾ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಸಂಘಟನೆಗಳು ಅಭಿಮಾನ ಪೂರ್ವಕವಾದ ಗೌರವವನ್ನು ಅರ್ಪಿಸಿ ಸಂಭ್ರ್ರಮಿಸಿತು.

ನಗರದ ರೆಡ್ ಬ್ರಿಕ್ಸ್ ಇನ್‌ನ ಸತ್ಕಾರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿ ಮಾತನಾಡಿ, ಭಾನು ಮುಷ್ತಾಕ್ ಅವರ ಎದೆಯ ಹಣತೆ ಕೃತಿಯನ್ನು ಇಂಗಲೀಷ್‌ಗೆ ಹಾರ್ಟ್ ಲ್ಯಾಂಪ್ ಆಗಿ ಅನುವಾದಿಸಿ ಬೂಕರ್ ಪ್ರಶಸ್ತಿಯನ್ನು ದೀಪಾ ಭಾಸ್ತಿ ಅವರು ಪಡೆದಿರುವುದು ಜಿಲ್ಲೆಯ ಇತಿಹಾಸದಲ್ಲೇ ಐತಿಹಾಸಿಕ ಸಾಧನೆ. ಇಂತಹ ಸಾಧನೆಯ ಮೂಲಕ ದೀಪಾ ಭಾಸ್ತಿ ಅವರು ಕೊಡಗಿಗೆ ಹೆಮ್ಮೆಯನ್ನು ತಂದಿದ್ದಾರೆಂದು ಮಂಥರ್ ಗೌಡ ಸಂತಸ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯದ ಅನುವಾದದ ಮೂಲಕ ವಿಶ್ವದ ಅತ್ಯುನ್ನತ ಅನುವಾದ ಸಾಹಿತ್ಯ ಪ್ರಶಸ್ತಿ ಬೂಕರ್‌ನ್ನು ದೀಪಾ ಅವರು ಪಡೆಯುವ ಮೂಲಕ, ಇಡೀ ದೇಶದ ಯುವ ಸಮೂಹಕ್ಕೆ ಸಾಹಿತ್ಯಾಸಕ್ತಿ ಮೂಡಿಸಲು ಅವರು ಪ್ರೇರಣೆಯನ್ನು ನೀಡಿದ್ದಾರೆ. ಪ್ರಸ್ತುತ ಡಿಜಿಟಲ್ ಮಾಧ್ಯಮ, ಕಂಪ್ಯೂಟರ್‌ಗಳ ಆಳಕ್ಕೆ ಇಳಿದಿರುವ ನಮ್ಮ ತಿಳುವಳಿಕೆಯನನ್ನು ಅದರಿಂದ ಹೊರ ತಂದು, ಪುಸ್ತಕಗಳನ್ನು ಓದುವ, ಸಾಹಿತ್ಯದೆಡೆಗೆ ಆಸಕ್ತಿಯನ್ನು ಹೊಂದುವ ಮನಸ್ಥಿತಿಯನ್ನು ದೀಪಾ ಭಾಸ್ತಿ ಅವರು ತಮ್ಮ ಅನುವಾದ ಕೃತಿಯ ಮೂಲಕ ಮಾಡಿದ್ದಾರೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮಾತನಾಡಿ, ದೀಪಾ ಭಾಸ್ತಿ ಅವರು ಬೂಕರ್ ಪ್ರಶಸ್ತಿಯನ್ನು ಪಡೆದಿರುವುದು ಕೇವಲ ವ್ಯಕ್ತಿಯೊಬ್ಬರ ಸಾಧನೆಗೆ ಸೀಮಿತವಾಗುವುದಿಲ್ಲ. ಇವರ ಸಾಧನೆಯು ಈ ನೆಲದ ಭಾಷೆ, ಶ್ರೀಮಂತ ಸಂಸ್ಕೃತಿಗಳಿಗೆ ಜಾಗತಿಕ ಮನ್ನಣೆ ದೊರಕಿದಂತಾಗಿದ್ದು, ಇದೊಂದು ಅಪೂರ್ವ ಸಂದರ್ಭವೇ ಆಗಿದೆ. ದೀಪಾ ಭಾಸ್ತಿ ಅವರು ತಮ್ಮ ಈ ಸಾಧನೆಯ ಮೂಲಕ ಯುವ ಲೇಖಕರಿಗೆ ತಾವು ಏನನ್ನಾದರು ಸಾಧಿಸಬಹುದೆನ್ನುವ ನಂಬಿಕೆ ಮತ್ತು ವಿಶ್ವಾಸಗಳನ್ನು ಮೂಡಿಸಿದ್ದಾರೆಂದು ದೃಢವಾಗಿ ನುಡಿದರು.

ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ ಮಾತನಾಡಿ, ಕೊಡಗಿನ ಮಗಳು ದೀಪಾ ಭಾಸ್ತಿ ಅವರು ಅಂತರರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿಗೆ ಪಾತ್ರರಾಗಿರುವುದು ಮಡಿಕೇರಿಯ ಸರ್ವ ಜನತೆಗೆ ಸಂಭ್ರಮವನ್ನು ಉಂಟು ಮಾಡಿದೆ. ಮುಂಬರುವ ದಿನಗಳಲ್ಲಿ ಇವರಿಂದ ಮತ್ತಷ್ಟು ಮಹತ್ವಪೂರ್ಣ ಕೃತಿಗಳು ಹೊರ ಬರುವಂತಾಗಲೆಂದು ಹಾರೈಸಿದರು.

ಕರ್ನಾಟಕ ಕೊಡವ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಸೈನಿಕ ಪರಂಪರೆ, ಕ್ರೀಡಾ ಕ್ಷೇತ್ರಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿರುವ ಕೊಡಗು, ಸಾಹಿತ್ಯ ಕ್ಷೇತ್ರದಲ್ಲಿ ಹಿಂದಿದೆ ಎನ್ನುವ ಚಿಂತನೆಯನ್ನು, ದೀಪಾ ಭಾಸ್ತಿ ಅವರು ಬೂಕರ್ ಪ್ರಶಸ್ತಿಯನ್ನು ಪಡೆಯುವ ಮೂಲಕ ತೊಡೆದು ಹಾಕಿದ್ದಾರೆ. ಜಿಲ್ಲೆಯಲ್ಲಿ ದೀಪಾ ಭಾಸ್ತಿ ಅವರು ಸಾಹಿತ್ಯದ ದೀಪವನ್ನು ಬೆಳಗಿದ್ದಾರೆಂದು ಅತೀವ ಸಂತಸವನ್ನು ವ್ಯಕ್ತಪಡಿಸಿದರು.

ಪೌರ ಸನ್ಮಾನ ಸ್ವೀಕರಿಸಿದ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಮಾತನಾಡಿ, ವಿಶ್ವದ ಯಾವುದೇ ಭಾಷೆಯ ಉತ್ತಮ ಕೃತಿಗಳು ಅನುವಾದಗೊಂಡು ಇತರೆ ಭಾಷಿಕ ಜನರಿಗೆ ತಲುಪದಿದ್ದರೆ ವಿಶ್ವದ ಜ್ಞಾನವೇ ಬರಡಾದೀತು. ಅನುವಾದಕರನ್ನು ಅಸಡ್ಡೆಯಿಂದ ಕಾಣುವ ಮನಸ್ಥಿತಿಯನ್ನು ಹೊರ ಬಂದು, ಅನುವಾದ ಸಾಹಿತ್ಯದ ಮಹತ್ವವನ್ನು ಅರಿತು ಅನುವಾದಕರನ್ನು ಪ್ರೋತ್ಸಾಹಿಸುವ ಅಗತ್ಯತೆ ಇದೆಯೆಂದು ತಿಳಿಸಿದರು.

ಕರ್ನಾಟಕ ಅರೆಭಾಷಾ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್, ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಇತರರಿದ್ದರು.

೫೧ ಸಂಘ ಸಂಸ್ಥೆಗಳಿಂದ ಪೌರಸನ್ಮಾನ: ಪೌರ ಸನ್ಮಾನ ಕಾರ್ಯಕ್ರಮದಲ್ಲಿ ೫೧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡು ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಿ ಗೌರವಿಸಿ ತಾವು ಸಂಭ್ರಮಿಸಿದ್ದು ಕಾರ್ಯಕ್ರಮದ ವಿಶೇಷ. ಇದೇ ಮೊದಲ ಬಾರಿಗೆ ಮಡಿಕೇರಿಯಲ್ಲಿ ಇಷ್ಟೊಂದು ಸಂಖ್ಯೆಯ ಸಂಘಸಂಸ್ಥೆಗಳಿಂದ ಪೌರಸನ್ಮಾನ ನಡೆದ ಹೆಗ್ಗಳಿಕೆಗೆ ಕಾರ್ಯಕ್ರಮ ಪಾತ್ರವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net