

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಸಮೀಪದ ವಕ್ಕರಹಳ್ಳಿ ಗ್ರಾಮದಲ್ಲಿ ಗುರುವಾರ ಕುರುಬನ ಕಟ್ಟೆ ಶ್ರೀ ಕ್ಷೇತ್ರದ ಲಿಂಗಯ್ಯ- ಚೆನ್ನಯ್ಯ ಕಂಡಾಯಗಳ ಉತ್ಸವ ನಡೆಯಿತು.
ಮಧ್ಯಾಹ್ನದ ವೇಳೆಗೆ ಗ್ರಾಮಕ್ಕೆ ಆಗಮಿಸಿದ ಕಂಡಾಯಗಳಿಗೆ ಹೊರವಲಯದ ಅರಳಿಕಟ್ಟೆ ಬಳಿ ಮುಖಂಡರು ಸ್ವಾಗತಿಸಿದರು. ನಂತರ ಪೂಜಾ ವಿಧಿ ವಿಧಾನಗಳನ್ನು ಪೂರೈಸಲಾಯಿತು. ಹೂವು ಹೊಂಬಾಳೆಯಿಂದ ಸಿಂಗಾರಗೊಳಿಸಿ ಮಹಾ ಮಂಗಳಾರತಿಯನ್ನು ದೇವರ ಗುಡ್ಡರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕೊಂಬು, ಕಹಳೆ, ತಮಟೆ, ನಗಾರಿಗಳೊಂದಿಗೆ ಬರುವ ಉತ್ಸವಕ್ಕೆ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಗ್ರಾಮದ ಎಲ್ಲ ಬೀದಿಗಳಲ್ಲಿ ದೇವರ ಗುಡ್ಡರು ಕಂಡಾಯಗಳನ್ನು ಹೊತ್ತು ಆಗಮಿಸಿದಾಗ ಪ್ರತಿ ಮನೆಗಳ ಕುಟುಂಬದ ಸದಸ್ಯರ ಜತೆಗೂಡಿ ಗೃಹಿಣಿಯರು ಪೂಜಾ ನೈವೇದ್ಯಗಳನ್ನು ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಅಬ್ಬರದ ಪಟಾಕಿ ಜತೆಗೆ ಕೊಂಬು ಕಹಳೆ ತಮಟೆ ನಗಾರಿಗಳ ಮೇಳ ಮೆರವಣಿಗೆಗೆ ಮೆರಗು ನೀಡಿದವು. ಯುವಕರು, ವಯೋವೃದ್ದರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಕಂಡಾಯಗಳ ಉತ್ಸವದ ಹಿನ್ನೆಲೆಯಲ್ಲಿ ಗ್ರಾಮದ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬೀದಿಯುದ್ದಕ್ಕೂ ರಂಗೋಲಿ ಬಿಡಿಸಲಾಗಿತ್ತು. ಅಳವಡಿಸಲಾಗಿದ್ದ ವಿದ್ಯುತ್ ದೀಪಗಳು ಜಗಮಗಿಸುವ ಮೂಲಕ ಹಬ್ಬದ ವಾತಾವರಣ ಕಳೆಗಟ್ಟಿತ್ತು.
ಗ್ರಾಮದ ಮುಖಂಡರಾದ ವಿ.ಜಿ. ಮಹಾದೇವಯ್ಯ, ಜಯರಾಜು, ರವಿ, ಗುರುಮೂರ್ತಿ, ನಿಂಗೇಗೌಡ, ಶಿವಮೂರ್ತಿ, ಪುಟ್ಟಮಾದಯ್ಯ, ನಂಜುಂಡಯ್ಯ, ಬೊಮ್ಮಯ್ಯ, ನಾಗಯ್ಯ, ಪುಟ್ಟರಾಚಯ್ಯ, ಮಹಾದೇವಯ್ಯ, ಬಸವರಾಜು ಮತ್ತಿತರರು ಕಂಡಾಯದ ಉತ್ಸವದಲ್ಲಿ ಇದ್ದರು.