

ಮುಧೋಳ: ಮಹಾತ್ಮರ ಸಾಧನೆಯ ಜೀವನ ಸಮಾಜಕ್ಕೆ ಮಾದರಿಯಾಗಿದೆ ಎಂದು ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಹೇಳಿದರು.
ತಾಲೂಕಿನ ಮಾಚಕನೂರ ಗ್ರಾಮದಲ್ಲಿ ಬೆನಕಟ್ಟಿಯ ಹೇಮ-ವೇಮನ ಸದ್ಬೋಧನ ಪೀಠ ಹಾಗೂ ಸ್ಥಳೀಯ ಹೇಮ-ವೇಮ ರಡ್ಡಿ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿಯ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ವೇಮನರ 179ನೇ ಮಾಸಿಕ ತತ್ವ ಚಿಂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾತ್ಮರ ಜೀವನ ತಿಳಿದಾಗ ನಮ್ಮ ಅಂತಃಕರಣದ ಕುರುಡತ್ವ ಕಳೆದುಕೊಳ್ಳಬಹುದಾಗಿದೆ. ಹೇಮರಡ್ಡಿ ಮಲ್ಲಮ್ಮ, ಮಹಾಯೋಗಿ ವೇಮನ ಸೇರಿದಂತೆ ಶರಣರು, ಮಹಾತ್ಮರು, ಜ್ಞಾನಿಗಳು, ಯೋಗಿಗಳು ವಚನ, ತತ್ವ ಚಿಂತನ ಹಾಗೂ ಸಂದೇಶಗಳ ಮೂಲಕ ಸಮಾಜಕ್ಕೆ ಬೆಳಕಾಗುವ ಆಧ್ಯಾತ್ಮದ ಸಂಪತ್ತನ್ನು ನೀಡಿದ್ದಾರೆ. ಆ ಸಂಪತ್ತನ್ನು ಅಳವಡಿಸಿಕೊಂಡರೆ ನಮಗೆ ಬದುಕಿನ ಅರ್ಥ ತಿಳಿಯುತ್ತದೆ ಎಂದರು.
ನಿವೃತ್ತ ಶಿಕ್ಷಕ ಶಂಕರ ಯಡಹಳ್ಳಿ ಮಾತನಾಡಿ, ಸತ್ಸಂಗ ನಡೆಸುವುದು ಮತ್ತು ಆಲಿಸುವುದರಿಂದ ಅರ್ಥಪೂರ್ಣ ಬದುಕು ನಡೆಸುವುದರ ಜತೆಗೆ ಒಳ್ಳೆಯ ಲ ಲಭಿಸುತ್ತದೆ ಎಂದರು.
ಚಿಂತನಸಿರಿ ಕೋಶಾಧ್ಯಕ್ಷ ಡಿ.ಎಂ. ಬೆಣ್ಣೂರ ಮಾತನಾಡಿ, ಹೇಮ-ವೇಮನ ಸದ್ಬೋಧನ ಪೀಠ ನಡೆದು ಬಂದ ದಾರಿ, ಅದರ ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು. ಹೊಳೆ ಬಸವೇಶ್ವರ ದೇವಸ್ಥಾನದ ಅರ್ಚಕ ಮಲ್ಲಯ್ಯ ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು.
ಸಮಿತಿ ಅಧ್ಯಕ್ಷ ರಾಜು ಪಾಟೀಲ, ಭೀಮನಗೌಡ ಪಾಟೀಲ, ಬಸವರಾಜ ಹುಗ್ಗಿ, ದುಂಡಪ್ಪ ದಾಸರಡ್ಡಿ, ರಮೇಶಗೌಡ ಪಾಟೀಲ, ಸುನೀಲ ಮದರಖಂಡಿ, ಸುರೇಶ ಕೋನರಡ್ಡಿ, ಹನಮಂತ ಬಡಪ್ಪನವರ, ನಿಂಗಣ್ಣ ಚಿತ್ತರಗಿ, ಗೋಪಾಲ ದಾಸರಡ್ಡಿ, ಸೇವಾ ಸಮಿತಿ ಕಾರ್ಯದರ್ಶಿ ಕಲ್ಮೇಶ ಪಾಟೀಲ ಮತ್ತಿತರರಿದ್ದರು.
ಬೆನಕಟ್ಟಿಯ ಮಲ್ಲಮಾಂಬೆ ಭಜನಾ ತಂಡ ವೇಮನರ ವಚನ ಪಠಿಸಿದರು. ಶಿಕ್ಷಕ ಮಂಜುನಾಥ ರೀಟ ಕಾರ್ಯಕ್ರಮ ನಿರ್ವಹಿಸಿದರು.