ಬೀದಿಗೆ ಬಂದ ಗುತ್ತಿಗೆ ನೌಕರರ ಬದುಕು

20241005_142019(0)
Published on

* ಏಜೆನ್ಸಿಗಳಿಂದ ನೋಡಿಸ್​ ನೀಡಿ ಸೇವೆಯಿಂದ ಬಿಡುಗಡೆ

* ಜಲಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದವರು ಅತಂತ್ರ

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆಲವು ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆ ಮಾಡಿದ್ದು, ಕೆಲಸ ಕಳೆದುಕೊಂಡವರ ಬದುಕು ಬೀದಿಗೆ ಬಿದ್ದಿದೆ.

ನಗರದ ಜಲಮಂಡಳಿಯಲ್ಲಿ ಕೆಲ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಹಲವು ಮಂದಿ ಬಿಲ್​ ಕಲೆರ್​, ಮೀಟರ್​ ರೈಡರ್​, ವಾಲ್​ಮನ್​, ಪಂಪ್​ ಆಪರೇಟರ್​ ಹೆಲ್ಪರ್​ ಸೇರಿ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ಎಲ್ಲ ಸಿಬ್ಬಂದಿಯನ್ನು ಶ್ರೀ ಮಾರುತಿ ಎಲೆಕ್ಟ್ರಿಕಲ್ಸ್​ ಮತ್ತು ಆರ್​.ಆರ್​. ಸರ್ವೀಸಸ್​ ಎಂಬ ಏಜೆನ್ಸಿ ಮೂಲಕ ನೇಮಕ ಮಾಡಲಾಗಿತ್ತು. ಈಗ, ಈ ಸಿಬ್ಬಂದಿಗೆ ಏಜೆನ್ಸಿಗಳಿಂದ  ನೋಟಿಸ್​ ನೀಡಿ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಜಲಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿ ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ.

ಕೆಲಸ ಕಳೆದುಕೊಂಡವರ ಆಳಲು!

ಹಲವು ವರ್ಷಗಳಿಂದ ನಗರದ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಲ್ಲಿ ವಿವಿಧ ವಿಭಾಗಗಳಲ್ಲಿ ಜೆನ್ಸಿಗಳ ಮೂಲಕ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಮ್ಮನ್ನು ಏಕಾಏಕಿ ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಹತ್ತು ವರ್ಷಗಳಿಗೂ ಹೆಚ್ಚುಕಾಲ ನಾವುಗಳು ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆವು. ಆದರೆ, ನಮ್ಮ ಸಂಬಳ ನೀಡಲು ಅನುದಾನ ಲಭ್ಯ ಇಲ್ಲ ಎನ್ನುವ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಲಾಗಿದೆ. ಇದರಿಂದ ದಿಕ್ಕು ತೋಚದಂತಾಗಿದೆ ಎಂದು ಕೆಲಸ ಕಳೆದುಕೊಂಡಿರುವ ದೀಪು, ಕುಮಾರ್​, ಮುತ್ತು, ಪ್ರಶಾಂತ್​, ಮಧುರಾಜ್​, ಕೃಷ್ಣ ರಾಜು, ವೆಂಕಟೇಶ, ಶಿಲ್ವಾ, ನೇತ್ರಾ, ಶೃತಿ, ಸತೀಶ್​ ಸೇರಿ ಹಲವರು ಅಳಲು ತೋಡಿಕೊಂಡಿದ್ದಾರೆ.

ನೋಟಿಸ್​ನಲ್ಲಿ ಏನಿದೆ?

ಏಜೆನ್ಸಿಗಳು ಸಿಬ್ಬಂದಿಗೆ ನೀಡಿರುವ ನೋಟಿಸ್​ನಲ್ಲಿ ಸೇವೆಯಿಂದ ಬಿಡುಗಡೆ ಮಾಡುತ್ತಿರುವ ಕಾರಣದ ಬಗ್ಗೆ ಸ್ಪಷ್ಟನೆ ನೀಡಲಾಗಿದ್ದು. ನೆಟ್ಕಲ್​ ಜಲಾಶಯ ಮೂಲದಿಂದ ರಾಮನಗರ ನಗರಕ್ಕೆ ಪ್ರತ್ಯೇಕ ಕುಡಿಯುವ ನೀರು ಸರಬರಾಜು ಯೋಜನೆ ಕಲ್ಪಿಸುವ ಕಾಮಗಾರಿಯ ಟ್ರಯಲ್​ ರನ್​ ಪ್ರಗತಿಯಲ್ಲಿದ್ದು, ಶ್ರೀದಲ್ಲೆ ಚಾಲನೆಗೊಳಿಸಲಾಗುತ್ತದೆ. ಶಿಂಷಾ ನದಿ ಹಾಗೂ ಬೆಂಗಳೂರು ಜಲ ಮಂಡಳಿಯ ಶುದ್ಧೀಕರಣ ಟಕದ ಬ್ಯಾಕ್​ ವಾಶ್​ ಮೂಲದ ಕುಡಿಯುವ ನೀರು ಸರಬರಾಜು ಯೋಜನೆಯ ನಿರ್ವಹಣೆಯನ್ನು ರಾಮನಗರ ನಗರದಲ್ಲಿ ಸದ್ಯದಲ್ಲೆ ಸ್ಥಗಿತಗೊಳಿಸಲಾಗುವುದು.

ಚನ್ನಪಟ್ಟಣ ನಗರಕ್ಕೆ ಶಿಂಷಾ ನದಿ ಮೂಲದ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಪ್ರಸ್ತುತ ನೀರನ್ನು 21ರ ನಾಲ್ಕು ಗಂಟೆ ಪಂಪ್​ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೇವಲ 12 ರಿಂದ 14 ಗಂಟೆ ಅವಧಿಗೆ ಪಂಪ್​ ಮಾಡಿ ಚನ್ನಪಟ್ಟಣ ನಗರಕ್ಕೆ ನೀರು ಸರಬರಾಜು ಮಾಡಬೇಕಾಗಿರುತ್ತದೆ. ಈ ನೆಲೆಯಲ್ಲಿ ಟಿ.ಕೆ. ಹಳ್ಳಿಯ ಜಲಶುದ್ಧೀಕರಣ ಟಕದಿಂದ ಚನ್ನಪಟ್ಟಣ ನಗರದವರೆಗೆ ಹಾಗೂ ಚನ್ನಪಟ್ಟಣ ನಗರ ಮತ್ತು ರಾಮನಗರ ವ್ಯಾಪ್ತಿಯಲ್ಲಿ ಹಾಲಿರುವ ಸಿಬ್ಬಂದಿ ಅವಶ್ಯಕತೆಗೆ ಅನುಗುಣವಾಗಿ ಕಡಿತಗೊಳಿಸಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸೇವೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ರಾಜಕಾರಣಿಗಳಿಗೆ ಮನವಿ

ಜಲಮಂಡಳಿಯಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿ, ಕೆಲಸವನ್ನು ಮುಂದುವರಿಸಿಕೊಡಿ ಎಂದು ಜನಪ್ರತಿನಿಧಿಗಳ ಬಳಿ ಮನವಿ ಮಾಡುತ್ತಿದ್ದಾರೆ. ಮಂಡಳಿಯಲ್ಲಿ ಈಗಾಗಲೇ ಸಾಕಷ್ಟು ಸಿಬ್ಬಂದಿ ಕೊರತೆಯಿದೆ. ಆದರೆ, ನಮಗೆ ಸಂಬಳ ನೀಡಲು ಅನುದಾನ ಇಲ್ಲ ಎಂಬ ಕಾರಣಕ್ಕೆ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ನಾವು ಈ ಕೆಲಸವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮ್ಮನ್ನು ಕೆಲಸದಲ್ಲಿ ಮುಂದುವರಿಸಿಕೊಡಿ ಎಂದು ಜನಪ್ರತಿನಿಧಿಗಳ ಮುಂದೆ ಅವಲತ್ತುಕೊಂಡಿರುವ ಸಿಬ್ಬಂದಿ, ನ್ಯಾಯ ಸಿಗುವ ಭರವಸೆ ಇದೆ. ಇಲ್ಲವಾದಲ್ಲಿ ಜಲಮಂಡಳಿ ಮುಂಭಾಗ ಅಮಾರಣಾಂತರ ಉಪವಾಸ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ.

ಜಲಮಂಡಳಿಯಲ್ಲಿ 12 ವರ್ಷದಿಂದ ಕಂದಾಯ ವಸೂಲಾತಿ ಕೆಲಸ ನಿರ್ವಹಿಸುತ್ತಿದ್ದೇನೆ. ನನ್ನಂತೆಯೇ ಹಲವಾರು ಮಂದಿ ವಿವಿಧ ವಿಭಾಗಗಳಲ್ಲಿ ಗುತ್ತಿಗೆ ಆಧಾರದಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದರು. ಈಗ, ಏಜೆನ್ಸಿಗಳು ನಮ್ಮನ್ನು ಸೇವೆಯಿಂದ ಬಿಡುಗಡೆಗೊಳಿಸಿವೆ. ಇದರಿಂದ ನಮಗೆ ದಿಕ್ಕುತೋಚದಂತಾಗಿದೆ. ಜನಪ್ರತಿನಿಧಿಗಳು ಮಾನವೀಯತೆ ಆಧಾರದ ಮೇಲೆ ನಮಗೆ ಸಹಾಯ ಮಾಡಬೇಕು.

ಶಿಲ್ಪಾ, ಕೆಲಸ ಕಳೆದುಕೊಂಡವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net