

ಮುಂಡರಗಿ: ದೇವರ ದಾಸಿಮಯ್ಯನವರ ವಚನಗಳಲ್ಲಿ ರೀತಿ-ನೀತಿ, ಮಾನವೀಯತೆ, ಲೋಕದ ಡೊಂಕ ತಿದ್ದುವ ಪರಿಣಾಮಕಾರಿ ಸಾಹಿತ್ಯ ಕಂಡುಬರುತ್ತದೆ. ಅವರ ಜೀವನ ದರ್ಶನ ಇತರರಿಗೆ ಮಾದರಿಯಾಗಿದೆ ಎಂದು ದೇವಾಂಗ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಘವೇಂದ್ರ ಕೊಪ್ಪಳ ಹೇಳಿದರು.
ಪಟ್ಟಣದ ಶ್ರೀ ಬನಶಂಕರಿದೇವಿ ಸಮುದಾಯ ಭವನದಲ್ಲಿ ಶ್ರೀ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ದೇವಾಂಗ ಸಮಾಜ, ಜಿಲ್ಲಾ ದೇವಾಂಗ ನೌಕರರ ಸಂಘ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ಆಶ್ರಯದಲ್ಲಿ ಶನಿವಾರ ಜರುಗಿದ ಮಾಸಿಕ ಶರಣ ಚಿಂತನ ಕಾರ್ಯಕ್ರಮದಡಿ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜೀವನ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಳೆ ನಿಮ್ಮ ದಾನ, ಬೆಳೆ ನಿಮ್ಮದಾನ, ಸುಳಿದು ಸೂಸುವ ಗಾಳಿ ನಿಮ್ಮದಾನ, ಎಲ್ಲವೂ ನಿಮ್ಮಿಂದಲೇ ಇರುವಾಗ ಬೆರೆಯವರನ್ನು ನೆನೆವುದು ಮಹಾಪಾಪ ಎಂದು ಹೇಳಿರುವ ದೇವರ ದಾಸಿಮಯ್ಯ ವಚನಕಾರರಲ್ಲಿ ಪ್ರಥಮ ವಚನಕಾರರಾಗಿದ್ದಾರೆ. ಇವರು 176 ಕಿಂತಲೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇವರು ಬೇರೆ-ಬೇರೆ ಅಲ್ಲ, ಇಬ್ಬರೂ ಒಬ್ಬರೇ ಎಂದು ಹೇಳಲಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಎ.ವೈ. ನವಲಗುಂದ ಮಾತನಾಡಿ, ಬಸವಣ್ಣನವರಿಗಿಂತ 100 ವರ್ಷ ಮೊದಲೇ ಲಿಂಗಸಮಾನತೆ ತಂದವರು ದೇವರ ದಾಸಿಮಯ್ಯನವರು. ಆಗಿನ ಕಾಲದಲ್ಲಿಯೇ ತಮ್ಮ ವಚನಗಳ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಕೆಲಸ ಮಾಡಿದರು. ದಾಸಿಮಯ್ಯನವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.
ಶ್ರೀ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೃಷ್ಣಮೂರ್ತಿ ಗುಬ್ಬಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ದೇವಾಂಗ ನೌಕರರ ಸಂಘದ ಗೌರವಾಧ್ಯಕ್ಷ ರಾಜೇಂದ್ರ ಬರದ್ವಾಡ, ದೇವಾಂಗ ಸಂಘದ ಜಿಲ್ಲಾಧ್ಯಕ್ಷ ದಶರಥರಾಜ ಕೊಳ್ಳಿ ಮಾತನಾಡಿದರು. ಈಶ್ವರ ಮೇಡ್ಲೇರಿ, ಮಹಾಬಳೇಶ್ವರಪ್ಪ ಬೇವಿನಮರದ, ಅಶ್ವಥ ಹೊನ್ನಳ್ಳಿ, ಪ್ರಭು ನೀಲಗುಂದ, ಶಂಕ್ರಮ್ಮ ಹಡಗಲಿ, ಚಂದ್ರಮತಿ ಗದ್ದಿ, ಬಸವರಾಜ ರಾಮೇನಹಳ್ಳಿ ಉಪಸ್ಥಿತರಿದ್ದರು.
ಅವಿನಾಶಲಿಂಗ ಗೋಟಖಿಂಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪಿ.ಆರ್. ಕೊಳ್ಳಿ ಹಾಗೂ ಶಿವಯೋಗಿ ಕೊಪ್ಪಳ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ನಂತರ ಮಂಜುನಾಥ ಅಳವಂಡಿ ಮತ್ತು ತಂಡದವರಿಂದ ಹನುಮಾನ ಚಾಲೀಸಾ ಪಠಣ ಮಾಡಲಾಯಿತು.