

ಆರ್.ತುಳಸಿಕುಮಾರ್ ಬೆಂಗಳೂರು
ನಗರ, ಅರೆ ನಗರಗಳ ಕೊಳೆಯನ್ನು ಸ್ವಚ್ಛ ಮಾಡುವ ಹೊಣೆ ಹೊತ್ತಿರುವ ಪೌರಕಾರ್ಮಿಕರು ತಮ್ಮ ಕೆಲಸವನ್ನು ಶ್ರದ್ಧೆವಹಿಸಿ ಮಾಡುತ್ತಿದ್ದಾರೆ. ಈ ಶುಚಿಗಾರರು ನಿತ್ಯವೂ ತಮ್ಮ ಕರ್ತವ್ಯ ನಿಭಾಯಿಸದಿದ್ದಲ್ಲಿ ಇಡೀ ನಗರ, ಪಟ್ಟಣ ದುರ್ನಾತ ಬೀರುವುದುಂಟು. ಈ ಅಂಶವನ್ನು ಗಮನಿಸಿಯೇ ನಗರಗಳಲ್ಲಿ ಪೌರಕಾರ್ಮಿಕರ ಸೇವೆಗೆ ಒತ್ತು ನೀಡಲಾಗಿದೆ. ಆದರೆ, ಸಿಟಿಯಲ್ಲಿನ ಕೊಳಕು ನಿವಾರಿಸುವವರ ಬದುಕು ದುಸ್ತರವಾಗಿದ್ದು, ಅವರಿಗೆ ಸಿಗಬೇಕಾದ ಸೌಲಭ್ಯಕ್ಕೆ ಗ್ಯಾರಂಟಿ ಇಲ್ಲವಾಗಿದೆ.
ಕೋವಿಡ್ ಸಾಂಕ್ರಾಮಿಕದ ವೇಳೆ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿ ಹಗಲಿರುಳು ಕೆಲಸ ಮಾಡಿ ಜನರ ಜೀವ ಉಳಿದವರಲ್ಲಿ ಪೌರಕಾರ್ಮಿಕರ ಪಾತ್ರ ಶ್ಲಾಘನೀಯ. ಇದನ್ನು ಸರ್ಕಾರ ಹಾಗೂ ಸಮಾಜದ ಗಣ್ಯರು ಶ್ಲಾಘಿಸಿ ಗೌರವಾದಾರಗಳನ್ನು ನೀಡಿದರು. ಈಗಲೂ ಕೂಡ ಈ ಶುಚಿಗಾರರು ನೈರ್ಮಲ್ಯವಿಲ್ಲದ ಸ್ಥಳಗಳಲ್ಲಿ ರಿಸ್ಕ್ ತೆಗೆದುಕೊಂಡೇ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಆದರೂ, ಸ್ಥಳೀಯ ಸಂಸ್ಥೆಗಳ ಆಡಳಿತ ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿಸುತ್ತಿವೆ. ಜತೆಗೆ ಕರ್ತವ್ಯ ನಿರ್ವಹಿಸಲು ಬೇಕಾದ ಮೂಲಸೌಕರ್ಯ ನೀಡದಿರುವುದು ಶುಚಿಗಾರರ ಅನಾರೋಗ್ಯಕ್ಕೆ ಒಳಗಾಗಿ ಬೇಗನೆ ವೃದ್ಧಾಪ್ಯಕ್ಕೆ ಒಳಗಾಗುತ್ತಿದ್ದಾರೆ.
ಇಂತಹ ಸಂಕಷ್ಟದ ವೃತ್ತಿಗೆ ಹೆಚ್ಚಿನ ಮಂದಿ ಮೂಗು ಮುರಿಯುವವರಿದ್ದಾರೆ. ಹಾಗಾಗಿ ಯಾರೂ ಮಾಡದ ಕೆಲಸವನ್ನು ನಿಭಾಯಿಸುವ ಸವಾಲು ಎದುರಿಸುತ್ತಿರುವ ಪೌರಕಾರ್ಮಿಕರ ಸ್ಥಿತಿಗತಿ ಸುಧಾರಣೆಗೆ ಸರ್ಕಾರ ಸಮರ್ಪಕವಾದ ಕ್ರಮ ಕೈಗೊಂಡಿಲ್ಲ. ಸ್ಥಳೀಯ ಸಂಸ್ಥೆಗಳ ಹೆಗಲಿಗೆ ವರ್ಗಾಯಿಸಿ ಕೈತೊಳೆದುಕೊಂಡ ಪರಿಣಾಮ, ಇವರ ಜೀವನ ಮುದುಡಿದ ತಾವರೆಯಂತಾಗಿದೆ. ಬೆರಳೆಣಿಕೆಯಷ್ಟು ಎನ್‌ಜಿಒ ಮಂದಿ ಒಂದಿಷ್ಟು ಕೆಲಸ ಮಾಡುತ್ತಿದ್ದರೂ, ಅದು ಅತ್ಯಲ್ಪ ಸೇವೆಯಾಗಿದೆ. ಕೋವಿಡ್ ವೇಳೆ ನಮಗೆ ಸಿಕ್ಕಿದ ಗೌರವ, ಮನ್ನಣೆ ಈಗ ಮಾಯವಾಗಿದ್ದು, ಮಾನವೀಯತೆ ದೃಷ್ಟಿಯಿಂದ ಪೌರಕಾರ್ಮಿಕರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಕೂಗು ಎದ್ದಿದೆ.
ಲಕ್ಷ ಶುಚಿಗಾರರ ಬಗ್ಗೆ ಅಲಕ್ಷ್ಯ:
ರಾಜ್ಯದಲ್ಲಿ ಜಿಬಿಎ ಜತೆಗೆ ಹತ್ತು ಮಹಾನಗರ ಪಾಲಿಕೆಗಳು ಅಸ್ತಿತ್ವದಲ್ಲಿವೆ. ಇವುಗಳಲ್ಲಿ ಸುಮಾರು 40 ಸಾವಿರ ಕಾಯಂ ಪೌರಕಾರ್ಮಿಕರು ಹಾಗೂ 60 ಸಾವಿರದಷ್ಟು ಗುತ್ತಿಗೆ ಕಾರ್ಮಿಕರಿದ್ದಾರೆ. ಅಂದರೆ, ನಗರಗಳಲ್ಲಿ ಲಕ್ಷ ಕಾರ್ಮಿಕರು ಶುಚಿ ಕಾರ್ಯದಲ್ಲಿ ನಿರತರಾಗಿದ್ದರೂ, ಈ ವರ್ಗದ ಜನರಿಗೆ ಸಿಗಬೇಕಾದ ಸೌಲಭ್ಯಗಳು ಮರಿಚಿಕೆಯಾಗಿದೆ. ಪೌರಕಾರ್ಮಿಕರು ಕೈಗವಸು, ಗಮ್ ಬೂತ್, ಮಾಸ್ಕ್ ಹಾಗೂ ಇತರ ಪರಿಕರಗಳಿಲ್ಲದೆ ಕರ್ತವ್ಯ ನಿಭಾಯಿಸಬೇಕಿದೆ. ರಜೆ ಇಲ್ಲದೆ ಕೆಲಸ ಮಾಡುತ್ತಿದ್ದರೂ, ಮೇಲ್ವಿಚಾರಕರು, ಅಧಿಕಾರಿಗಳ ಬೈಗುಳ ಮಾತ್ರ ನಿತ್ಯವೂ ಬೋನಸ್ ರೀತಿ ಸಿಗುತ್ತಿರುತ್ತದೆ. ಮಹಿಳಾ ಪೌರಕಾರ್ಮಿಕರಿಗೆ ತಿಂಗಳಿಗೊಮ್ಮೆ ರಜೆ ನೀಡದೆ ದುಡಿಸಿಕೊಳ್ಳಲಾಗುತ್ತಿದೆ. ಆರೋಗ್ಯ ಸೌಲಭ್ಯ, ವಿಮೆ, ಪಿಂಚಣಿ ಇಲ್ಲದೆ ಕೆಲಸ ನಿರ್ವಹಿಸಿ ನಿವೃತ್ತಿರಾಗಬೇಕಾದ ಸ್ಥಿತಿ ಇದೆ.
ರಾಜಧಾನಿಯಲ್ಲಿ ತುಸು ಸುಧಾರಣೆ:
ಬಿಬಿಎಂಪಿಯಲ್ಲಿ (ಈಗ ಜಿಬಿಎ) ಕರ್ತವ್ಯ ನಿರ್ವಹಿಸುತ್ತಿದ್ದ 12,892 ಪೌರಕಾರ್ಮಿಕರನ್ನು ಸರ್ಕಾರ ಇತ್ತೀಚಿಗಷ್ಟೇ ಕಾಯಗೊಳಿಸಿದೆ. ಇಂತಹವರಿಗೆ ಮಾಸಿಕ ಮೂಲವೇತವಾಗಿ 39 ಸಾವಿರ ರೂ. ನೀಡಲಾಗುತ್ತಿದೆ. ಆಗಾಗ್ಗೆ ರಜೆಯೂ ಸಿಗುತ್ತಿದೆ. ಆದರೆ, ಈ ಸೌಲಭ್ಯ ಗುತ್ತಿಗೆ ಕಾರ್ಮಿಕರಿಗೆ ಸಿಗುತ್ತಿಲ್ಲ. ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತೆ ಪಾಲಿಕೆಯು ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿದರೂ, ವೇತನ ನೀಡುವಾಗ ಅರ್ಧದಷ್ಟು ಹಣವನ್ನು ಮಾತ್ರ ನೀಡಲಾಗುತ್ತಿದೆ. ಈ ತಾರತಮ್ಯದಿಂದಾಗಿ ಸ್ವಚ್ಛತಾ ಕೆಲಸಕ್ಕೆ ಹೆಚ್ಚಿನ ಮಂದಿ ಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾವಾಗಿದೆ.
ಪೌರಕಾರ್ಮಿಕರ ಬೇಡಿಕೆಗಳೇನು?:
* ಸ್ವಚ್ಛತಾ ಕೆಲಸದಲ್ಲಿ ನಿರತರಾದವರೆಲ್ಲರಿಗೂ ನಗದುರಹಿತ ಆರೋಗ್ಯ ಕಾರ್ಡ್ ಸೇವೆ
* ಪ್ರತಿ ತಿಂಗಳು ಸಂಕಷ್ಟ ಭತ್ಯೆ ವಿತರಣೆ
* ಪಿಎಫ್ ವಂತಿಗೆ ಸಮರ್ಪಕವಾಗಿ ಪಾವತಿಸುವುದು
* ಆಕಸ್ಮಿಕ ನಿಧನ, ಅಪಘಾತದಿಂದ ಮೃತರಾದಾಗ ಕನಿಷ್ಠ 10 ಲಕ್ಷ ರೂ. ಪರಿಹಾರ
* ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ನೆರವು
* ಸರ್ಕಾರದ ಮಾನದಂಡದಂತೆ ಪಿಂಚಣಿ ಸೌಲಭ್ಯ
* ಗುತ್ತಿಗೆ ಕಾರ್ಮಿಕರಿಗೆ ನೇರ ವೇತನ ಪಾವತಿ ಸೌಲಭ್ಯ ಒದಗಿಸುವುದು.
ಯಾವುದೇ ನಗರ, ಪಟ್ಟಣಗಳಲ್ಲಿ ಸ್ವಚ್ಛತೆ ಕೈಗೊಂಡು ಅಲ್ಲಿನ ವಾತಾವರಣವನ್ನು ಶುದ್ಧಿ ಮಾಡುವವರು ಪೌರಕಾರ್ಮಿಕರು ಮಾತ್ರ. ಸಮಾಜದ ಕೊಳೆ ಹೆಕ್ಕಲು ಯಾರೂ ಮುಂದೆ ಬಾರದಿದ್ದಾಗ ನಮ್ಮಜನ ಕರ್ತವ್ಯ ನಿರ್ವಹಿಸುತ್ತಿದ್ದರೂ, ಸರಿಯಾದ ಸೌಲಭ್ಯ ಸಿಗದೆ ಸಮಸ್ಯೆಯಲ್ಲಿದ್ದಾರೆ. ಸರಿಯಾದ ಸಮಯಕ್ಕೆ ವೇತನ, ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯವನ್ನು ಸರ್ಕಾರ ಕಲ್ಪಿಸಲಿ.
- ಡಾ. ಬಾಬು, ಬೆಂಗಳೂರು ಸಿಟಿ ಕಾರ್ಪೊರೇಷನ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ