ಹಳ್ಳಿಗಳಿಂದಲೇ ಶಹರ ಜನರ ಬದುಕು

3 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಹರಗಳನ್ನು ಹಳ್ಳಿಯ ಜನ ಬದುಕಿಸುತ್ತಿದ್ದಾರೆ ಎಂಬ ಅರಿವು ಶಹರದ ಜನತೆಗೆ ಬರದಿದ್ದರೆ ಪಶ್ಚಾತಾಪ ಪಡುವ ದಿನಗಳು ದೂರವಿಲ್ಲ ಎಂದು ಸುಸ್ಥಿರ ಅಭಿವೃದ್ಧಿ ಚಿಂತಕ ಡಾ. ಪ್ರಕಾಶ ಭಟ್​ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ವಿಶಾಲ ರಾಜೇಖರ ಹಂಚಿನಮನಿ ಸ್ಮರಣೆ ದತ್ತಿ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾಳೆಯ ಹಳ್ಳಿಗೆ ದಾರಿ ಯಾವುದು ? ಕುರಿತು ಉಪನ್ಯಾಸ ನೀಡಿದರು.
ದೇಶದ ಜನಸಂಖ್ಯೆಯಲ್ಲಿ 90 ಕೋಟಿಯಷ್ಟು ಜನ ಹಳ್ಳಿಯಲ್ಲಿದ್ದಾರೆ. ಅವರ ಶ್ರಮದ ಫಲವನ್ನು ಶಹರದ ಜನ ಅನುಭವಿಸುತ್ತಿದ್ದೇವೆ ಎಂಬ ತಿಳಿವಳಿಕೆ ಇರಬೇಕು. ಉದ್ಯೋಗಾವಕಾಶಗಳು ಶಹರ ಕೇಂದ್ರಿತ ಸೃಷ್ಟಿಯಾಗುತ್ತಿರುವುದಕ್ಕೆ ಹಳ್ಳಿ ಯುವಕರಲ್ಲಿ ಅಸಮಾಧಾನ ಇದೆ. ಗ್ರಾಮೀಣ ಪ್ರದೇಶದಲ್ಲಿ ಯುವಕರಿಗೆ ಉದ್ಯೋಗ ದೊರಕುವಂತೆ ಮಾಡುವ ಯೋಜನೆ ರೂಪಿಸದಿದ್ದರೆ ಹಳ್ಳಿಗರ ಬದುಕು ಇನ್ನಷ್ಟು ಕಷ್ಟಕ್ಕೆ ಸಿಲುಕಿಸಿದಂತಾಗಿ ಮುಂದೊಂದು ದಿನ ಆಹಾರದ ಕೊರತೆ ಅನುಭವಿಸಬೇಕಾದೀತು ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎ.ಬಿ. ದೇಸಾಯಿ ಮಾತನಾಡಿ, ಹಳ್ಳಿಗಳು ಸಾಕಷ್ಟು ಸುಧಾರಣೆಯಾಗಿವೆ. ಕೃವಿವಿ ರೈತರ ಮಕ್ಕಳಿಗೆ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ದತ್ತಿದಾನಿ ಚನಬಸಪ್ಪ ಮರದ ಮಾತನಾಡಿದರು. 2023-24ನೇ ಸಾಲಿನಲ್ಲಿ ಬಿಕಾಂನಲ್ಲಿ ಪ್ರಥಮ ಸ್ಥಾನ ಪಡೆದ ಕೆ.ಎಚ್​. ಪಾಟೀಲ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಪ್ರೀತಿ ನರೇಂದ್ರ ಅವರಿಗೆ ಸನ್ಮಾನಿಸಲಾಯಿತು.
ಡಾ. ಸಂಜೀವ ಕುಲಕರ್ಣಿ, ವಿಶ್ವೇಶ್ವರಿ ಹಿರೇಮಠ, ಶಿವಾನಂದ ಭಾವಿಕಟ್ಟಿ, ಪ್ರೊ. ಶಶಿಧರ ತೋಡಕರ, ಡಾ. ಲಿಂಗರಾಜ ಅಂಗಡಿ, ಡಾ. ಬಾಳಣ್ಣ ಶೀಗಿಹಳ್ಳಿ, ಸಿ.ಎಸ್​. ಪಾಟೀಲ, ಮಹೇಶ ಮರದ, ಬಿ.ಎಲ್​. ಶಿವಳ್ಳಿ, ಸುರೇಶ ಹಿರೇಮಠ, ಮಾರ್ಕಂಡೇಯ ದೊಡಮನಿ, ಹಂಚಿನಮನಿ ಕುಟುಂಬಸ್ಥರು, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net