

ಚಿಕ್ಕೋಡಿ: ಬಸವಾದಿ ಶಿವಶರಣರ ಅರಿವು, ಆಚಾರ-ವಿಚಾರಗಳು ನಮಗೆ ದಾರಿದೀಪವಾಗಿವೆ ಎಂದು ಶ್ರೀ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು.
ತಾಲೂಕಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೂಡಲಸಂಗಮದಲ್ಲಿ ಏ.29, 30ರಂದು ನಡೆಯಲಿರುವ ರಾಜ್ಯಮಟ್ಟದ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ಅಭಿಯಾನ ರಥವನ್ನು ತಹಸೀಲ್ದಾರ್ ಚಿದಂಬರ ಕುಲಕರ್ಣಿ ಬರಮಾಡಿಕೊಂಡರು. ನಂತರ ಶ್ರೀಸಂಪಾದನಾ ಸ್ವಾಮೀಜಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಪಣೆ ಮಾಡಿ, ವಚನ ಸಾಹಿತ್ಯದ ಪುಸ್ತಕ ಹೊತ್ತು ಮೆರವಣಿಗೆಯಲ್ಲಿ ಸಾಗುವ ಅಭಿಯಾನ ರಥಕ್ಕೆ ಪೂಜೆ ಸಲ್ಲಿಸಿದರು.
ನಿವೃತ್ತ ಪ್ರಾಧ್ಯಾಪಕ ಎಸ್.ವೈ.ಹಂಜಿ ಮಾತನಾಡಿ, ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರು ಹಾಗೂ ಇತರ ಶರಣರು ಸಮಾನತೆಗಾಗಿ ಶ್ರಮಿಸಿದರು. ಅವರ ಸಂದೇಶಗಳು ವಚನ ಸಾಹಿತ್ಯದಲ್ಲಿವೆ. ಪ್ರತಿಯೊಬ್ಬರು ವಚನ ಓದಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸಂಜಯ ಕವಟಗಿಮಠ, ಅಶೋಕ ಹರಗಾಪುರೆ, ಎಂ.ಐ.ಬೆಂಡವಾಡೆ, ಎಸ್.ಎ.ಖಡ್ಡ, ಬಿ.ಐ.ಪಾಟೀಲ, ಎಸ್.ಬಿ.ಸೊಲ್ಲಾಪುರೆ, ಶೇಖರ ಚಿತ್ತವಾಡಗಿ, ಪಿಎಸ್‌ಐ ಬಸವರಾಜ ನೇರ್ಲಿ, ಮುಖ್ಯಾಧಿಕಾರಿ ವೆಂಕಟೇಶ ನಾಗನೂರ, ಪ್ರತಾಪ ಕೆ., ಆರ್.ಐ.ನಾಯಕ, ಪಿ.ಬಿ.ಶೀಲವಂತ, ಪ್ರವೀಣ ಗಂಧ ಇತರರಿದ್ದರು.