

ಮಧುಗಿರಿ: ಕರೊನಾ ಸೋಂಕಿನ ಹೊಡೆತಕ್ಕೆ ಎಲ್ಲ ಕ್ಷೇತ್ರಗಳು ಅಕ್ಷರಶಃ ನಲುಗಿವೆ, ಹಾಗೇ ಜಾತ್ರೆಗಳಲ್ಲಿ ರಾಟೆ ಆಡಿಸುತ್ತ ಬದುಕಿನ ಬಂಡಿ ಸಾಗಿಸುತ್ತಿದ್ದವರ ಜೀವನ ಮಹಾಮಾರಿಯ ಅಬ್ಬರಕ್ಕೆ ಗಿರ ಗಿರ ತಿರುಗುತ್ತಿದೆ....
ಮಧುಗಿರಿಯ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ಜಾತ್ರೆಗೆ ರಾಟೆ ಆಡಿಸಲು ಬಂದಿದ್ದವರು ಇತ್ತ ರಾಟೆಯೂ ಆರಂಭವಾಗದೇ ಅತ್ತ ತಮ್ಮೂರುಗಳಿಗೆ ಹೋಗಲು ಸಾಧ್ಯವಾಗದೇ 35 ಕಾರ್ಮಿಕರು 8ಕ್ಕೂ ಹೆಚ್ಚು ಮಕ್ಕಳೊಂದಿಗೆ ರಾಟೆ ಸ್ಥಳದಲ್ಲೇ 8 ತಿಂಗಳಿನಿಂದ ಶೆಡ್ ನಿರ್ಮಿಸಿಕೊಂಡು ದಿನ ದೂಡುತ್ತಿದ್ದು, ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ.
ಪ್ರತೀ ವರ್ಷ ನಡೆಯುವ ಶ್ರೀದಂಡಿನ ಮಾರಮ್ಮ ಜಾತ್ರೆಯಲ್ಲಿ ರಾಟೆಯೇ ಬಹುದೊಡ್ಡ ಮನೋರಂಜನೆ. ಮಾರ್ಚ್‌ನಲ್ಲಿ ನಡೆಯುವ ಜಾತ್ರೆಯಲ್ಲಿ ರಾಟೆ ಆಡಿಸಿದರೆ ನಾಲ್ಕು ಕಾಸು ನೋಡಬಹುದು ಎಂದುಕೊಂಡು ರಾಜ್ಯದ ವಿವಿಧ ಊರುಗಳಿಂದ ಬಂದಿದ್ದವರಿಗೆ ಕರೊನಾ ಕಂಟಕವಾಗಿ ಪರಿಣಮಿಸಿದೆ. ಜಾತ್ರೆ ಆರಂಭವಾದ 3 ದಿನಗಳಿಗೆ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ವಿಧಿಯಿಲ್ಲದೇ ರಾಟೆ ನಿಲ್ಲಿಸಬೇಕಾಯಿತು. ಇದರಿಂದ ಕಾರ್ಮಿಕರು ಸಂಪಾದನೇ ಇಲ್ಲದೆ ಅಕ್ಷರಶಃ ನಲುಗಿದ್ದು, 8 ತಿಂಗಳಿನಿಂದ ಸ್ಥಳದಲ್ಲೇ ಶೆಡ್ ನಿರ್ಮಿಸಿಕೊಂಡು ರಾಟೆಯ ವಸ್ತುಗಳಿಗೆ ಕಾವಲು ಕಾಯುತ್ತಾ ದಿನ ದೂಡುತ್ತಿದ್ದಾರೆ.
ಆರಂಭದ ದಿನಗಳಲ್ಲಿ ತಹಸೀಲ್ದಾರ್ ಡಾ.ಜಿ.ವಿಶ್ವನಾಥ್ ಅವರು ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ ದಿನಸಿ ಸಾಮಗ್ರಿ ನೀಡಿದ್ರು, ಆಮೇಲೆ ಇಲ್ಲಿಯೇ ಕೃಷಿ ಕೂಲಿ, ಗಾರೆ ಕೆಲಸಕ್ಕೆ ಹೋಗಿ ಜೀವನ ನಡೆಸಿದ್ವಿ, ಈ ವರ್ಷ ಕೃಷಿ ಚಟುವಟಿಕೆಗಳು ಮುಗಿದ್ವು, ಈ ರಾಟೆ ಯಾವಾಗ ಚಾಲು ಆಗುತ್ತೊ ಎನ್ನುತ್ತಾರೆ ಕಾರ್ಮಿಕರು.
ಸಿನಿಮಾ, ಮಾಲ್‌ಗಳಿಗಿಲ್ಲದ ನಿರ್ಬಂಧ ನಮಗೇಕೆ?: ಲಾಕ್‌ಡೌನ್ ತೆರವುಗೊಳಿಸಿದ ನಂತರ ಸರ್ಕಾರ ಹಂತ ಹಂತವಾಗಿ ಸಿನಿಮಾ, ಮಾಲ್ ಮತ್ತು ಜಿಮ್‌ಗಳಿಗೆ ಅವಕಾಶ ನೀಡಿದೆ, ಆದರೆ ನಮಗೇಕೆ ನಿರ್ಬಂಧ? ಈಗಾಗಲೇ ಕರೊನಾ ಮಹಾಮಾರಿಯಿಂದಾಗಿ ರಾಜ್ಯಾದ್ಯಂತ ಸುಮಾರು 2 ಲಕ್ಷಕ್ಕೂ ಹೆಚ್ಚು ವಸ್ತು ಪ್ರದರ್ಶನದ ಆಯೋಜಕರು, ಮಳಿಗೆಯವರು ಮತ್ತು ಕಾರ್ಮಿಕರು ಕೆಲಸವಿಲ್ಲದೇ ಹತಾಶರಾಗಿದ್ದಾರೆ. ನಮಗೂ ಅನುಮತಿ ನೀಡಿದರೆ ಕಾರ್ಮಿಕರು ಒಂದಷ್ಟು ಉಸಿರಾಡಬಹುದು. ಈ ಕುರಿತು ಆರೋಗ್ಯ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದು, ಸಕಾರಾತ್ಮಕವಾಗಿ ಸಂದಿಸಿದ್ದಾರೆ, ಆದರೆ ಸರ್ಕಾರ ಮೀನಮೇಷ ಎಣಿಸುತ್ತಿದೆ ಎನ್ನುತ್ತಾರೆ ಇಲ್ಲಿ ರಾಟೆ ಹಾಕಿರುವ ನೆಲಮಂಗಲದ ಎಕ್ಸಿಬಿಷನ್ ಗುತ್ತಿಗೆದಾರ ಶ್ರೀನಿವಾಸ್.
ವಿವಿಧ ಊರುಗಳಿಂದ ಬಂದಿರುವ ಸುಮಾರು 35 ಕಾರ್ಮಿಕರು ಸಂಸಾರ ತೊರೆದು ಕಳೆದ 8 ತಿಂಗಳಿನಿಂದ ಕೆಲಸವಿಲ್ಲದೇ ಕಂಗಾಲಾಗಿದ್ದಾರೆ, ಬೇರೆಡೆ ಹೋಗಿ ಮಾಡಲು ಕೆಲಸವಿಲ್ಲದೆ ಇಲ್ಲಿಯೇ ಬಿಡಾರ ನಿರ್ಮಿಸಿಕೊಂಡು ದಿನ ದೂಡುತ್ತಿದ್ದೇವೆ. ಇಷ್ಟು ದಿನ ಕೂಲಿ ನಾಲಿ ಮಾಡಿ ಜೀವನ ಸಾಗಿಸಿದ್ದೆವು. ಮುಂದಿನದ್ದೇ ಚಿಂತೆಯಾಗಿದೆ. ಮಹದೇವ್ ಕಾರ್ಮಿಕ ಪಟ್ಟಣದಲ್ಲೇ ರಾಟೆ ಆಡಿಸುವ ಸುಮಾರು 35 ಕಾರ್ಮಿಕರಿದ್ದಾರೆ, ಇವರ ಸಮಸ್ಯೆಯನ್ನು ಪಾವಗಡದ ರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಮತ್ತು ತಹಸೀಲ್ದಾರ್ ಡಾ.ವಿಶ್ವನಾಥ್ ಅವರ ಗಮನಕ್ಕೆ ತಂದು ಜೀವನಕ್ಕೆ ಅನುಕೂಲ ಮಾಡಿಕೊಡಲಾಗುವುದು. ಎಚ್.ಆರ್.ಶಶಿಕುಮಾರ್ ರಕ್ತದಾನಿ ಶಿಕ್ಷಕರ ಬಳಗದ ಅಧ್ಯಕ್ಷ