ಛಾಯಾಗ್ರಾಹಕರ ಬದುಕು ದುಸ್ತರ

30mdk12
ಅಂತಾರಾಷ್ಟ್ರೀಯ ಕುಸ್ತಿ ಚಾಂಪಿಯನ್ ಅಜ್ಞ ಸೇರಿದಂತೆ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿ.ಪಿ.ಶಶಿಧರ್, ಕೆ.ಎಸ್. ನಾಗೇಶ್, ಚಿರಂತ್, ಆವರ್ತಿ ಮಹದೇವಪ್ಪ ಇದ್ದರು.
Published on

ಕುಶಾಲನಗರ: ಜನರ ನೆನಪಿನ ಬುತ್ತಿಯನ್ನು ಕಟ್ಟಿಕೊಡುವ, ಸ್ಮೈಲ್ ಪ್ಲೀಸ್ ಎಂದು ಬೇರೊಬ್ಬರ ಮುಖದಲ್ಲಿ ಸದಾ ನಗು ಮೂಡಿಸುವ ಛಾಯಾಗ್ರಾಹಕರ ಬದುಕು ಅತ್ಯಂತ ದುಸ್ತರವಾಗಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಬೇಸರ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿಂದ ವೀರ ಭೂಮಿ ಜಾನಪದ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮತ್ತು ನಿಕಾನ್ ಕ್ಯಾಮರಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಛಾಯಾಗ್ರಾಹಕರು ಅತ್ಯಂತ ತಾಳ್ಮೆಯ ವ್ಯಕ್ತಿಗಳು. ನಮ್ಮ ಸಂತೋಷದ ಕ್ಷಣಗಳಿಗಾಗಿ ಕಾಯುತ್ತಾ ಇದ್ದು, ಅದನ್ನು ಕ್ಲಿಕ್ಕಿಸಿ ನಮಗಿಂತ ಹೆಚ್ಚು ಸಂಭ್ರಮ ಪಡುವವರು. ಇತ್ತೀಚಿಗೆ ಇವರ ನೈಪುಣ್ಯತೆಗೆ ಸವಾಲಾಗಿ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ. ಗ್ರಾಮೀಣ ಭಾಗದ ಫೋಟೋಗ್ರಾಫರ್‌ಗಳು ಮಾತ್ರ ಆಧುನಿಕ ತಂತ್ರಜ್ಞಾನದ ಜತೆಯಲ್ಲಿ ಹೋಗಲು ಸಾಧ್ಯವಾಗದೆ ವೃತ್ತಿಯಲ್ಲಿ ಹಿಂದೆ ಬೀಳುತ್ತಿರುವುದು ಶೋಚನೀಯ. ಅಂತಹ ಕಲೆಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಮಾಡಬೇಕು ಎಂದರು.

ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, 15 ವರ್ಷಗಳಿಂದ ಜಿಲ್ಲೆಯಲ್ಲಿ ಸಂಘಟನೆ ಬಲಿಷ್ಠಗೊಳಿಸಿಕೊಂಡು ಬಂದಿದ್ದರೂ ಇದುವರೆಗೂ ಸಂಘಕ್ಕಾಗಿ ಒಂದು ಸ್ವಂತ ಸೂರು ಹೊಂದಲು ಸಾಧ್ಯವಾಗಿಲ್ಲ. ಜನಪ್ರತಿನಿಧಿಗಳು ಮತ್ತು ಸರ್ಕಾರ ಕೂಡಲೇ ನಮ್ಮ ಸಂಘಟನೆಗಾಗಿ ಒಂದು ನಿವೇಶನ ನೀಡಬೇಕೆಂದು ಒತ್ತಾಯಿಸಿದರು.

ಚಲನಚಿತ್ರ ನಟ ಚಿರಂತ್ ಮಾತನಾಡಿ, ಯಾವುದೇ ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಬಂದರೂ ಫೋಟೋಗ್ರಾಫರ್‌ಗಳ ವೃತ್ತಿಗೆ ತೊಂದರೆ ಆಗುವುದಿಲ್ಲ. ಅದಕ್ಕಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಫೋಟೋಗ್ರಾಫರ್‌ಗಳು ಪೋಟೋ ಮತ್ತು ವಿಡಿಯೋಗಳ ಮೂಲಕ ನಮ್ಮೆಲ್ಲರ ನೆನಪುಗಳನ್ನು ಸದಾ ಹಸಿರಾಗಿ ಇರಲು ಶ್ರಮಿಸುವ ಇವರು ಕುಟುಂಬದ ಸದಸ್ಯರಾಗಿರುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ರಫೀಕ್, ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ವಸಂತ್, ಅಧ್ಯಕ್ಷ ಆವರ್ತಿ ಆರ್.ಮಹದೇವಪ್ಪ ಮಾತನಾಡಿದರು.

ಕೂಡುಮಂಗಳೂರು ಗ್ರಾಮದ ಅಂತಾರಾಷ್ಟ್ರೀಯ ಕುಸ್ತಿ ಚಾಂಪಿಯನ್ ಅಜ್ಞ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಬಿ.ವೈ.ಲವಕುಮಾರ್, ನಿರ್ದೇಶಕ ಡೇವಿಡ್ ಸೊಲೊಮನ್, ರಾಜ್ಯ ಸಮಿತಿ ನಿರ್ದೇಶಕ ದೀಪಕ್ ಕುಮಾರ್, ದಕ್ಷಿಣ ಕೊಡಗು ಸಂಘದ ರವೀಂದ್ರ, ಮಡಿಕೇರಿ ಸಂಘದ ಪ್ರದೀಪ್ ಮರಗೋಡು, ಪ್ರೊಫೇಷನಲ್ ಫೋಟೋಗ್ರಾಫರ್ಸ್ ಅಧ್ಯಕ್ಷ ಜೋಬಿ, ಪುಷ್ಪಗಿರಿ ಸಂಘದ ಅಧ್ಯಕ್ಷ ವಿನಯ್, ಜಿಲ್ಲೆಯ ಮಾಜಿ ಅಧ್ಯಕ್ಷ ಡ್ಯಾಡು ಜೋಸೆಫ್, ವಿಶ್ವ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net