

ಪಾಂಡವಪುರ : ತಾಲೂಕಿನ ಹಿರೇಮರಳಿ ಗ್ರಾಮದ ಹೊರವಲಯದ ಆಲೆಮನೆಯ ಬಳಿ ಕಟ್ಟ್ಟಿಹಾಕಿದ್ದ ಕರು ಹಾಗೂ ಮೇಕೆಯ ಮೇಲೆ ಚಿರತೆ ದಾಳಿ ನಡೆಸಿ ಕರು ಕೊಂದು ಮೇಕೆಯನ್ನು ಹೊತ್ತೊಯ್ದಿದೆ.
ಗ್ರಾಮದ ರಾಜೇಶ್ ಅವರ ಕರು ಹಾಗೂ ಮೇಕೆ ಭಾನುವಾರ ರಾತ್ರಿ ಚಿರತೆ ದಾಳಿಗೆ ಬಲಿಯಾಗಿದೆ. ಆಲೆಮನೆ ಕೆಲಸ ಮುಗಿಸಿ ಕಾರ್ಮಿಕರು ಹಾಗೂ ಮಾಲೀಕರು ಮಲಗಿದ್ದ ಸಂದರ್ಭದಲ್ಲಿ ಚಿರತೆ ದಾಳಿ ನಡೆಸಿ ಎರಡು ಕರು ಹಾಗೂ ಮೇಕೆಯ ಮೇಲೆ ದಾಳಿ ನಡೆಸಿ ಕರುಗಳನ್ನು ಕೊಂದು ಮೇಕೆಯನ್ನು ಹೊತ್ತೊಯ್ದಿದೆ. ಮಾಲೀಕರು ಬೆಳಗ್ಗೆ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಒಂದು ಕರುವಿನ ಕಳೆಬರ ಆಲೆಮನೆಯ ಬಳಿಯೇ ದೊರಕಿದ್ದು, ಮತ್ತೊಂದು ಕರುವನ್ನು ಸ್ವಲ್ಪ ದೂರದವರೆಗೆ ಎಳೆದೊಯ್ದು ಕಬ್ಬಿನ ಗದ್ದೆಯ ಬಳಿ ಬಿಟ್ಟು ಹೋಗಿದೆ. ಮೇಕೆಯ ದೇಹ ಪತ್ತೆಯಾಗಿಲ್ಲ.
ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮೃತ ಕರುಗಳ ಮರಣೋತ್ತರ ಪರೀಕ್ಷೆ ನಡೆಸಿ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು. ಚಿರತೆ ದಾಳಿಯಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ರೈತರು ಸಾಲ ಮಾಡಿ ಕಸು, ಕರು ಹಾಗೂ ಮೇಕೆಗಳನ್ನು ಕೊಂಡು ಸಾಕಣೆ ಮಾಡುತ್ತಿದ್ದಾರೆ. ಆದರೆ ಇಂತಹ ಪ್ರಕರಣದಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದ್ದು ಸರ್ಕಾರ ಹಾಗೂ ಅರಣ್ಯಾಧಿಕಾರಿಗಳು ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.