

ಗೋಕರ್ಣ: ಭಾರತದ ಸನಾತನ ಪರಂಪರೆಯ ಋಷಿಮುನಿಗಳ ಜ್ಞಾನ ಸಂಪತ್ತು ಇಂದಿನ ಮಾನವ ಕುಲಕ್ಕೆ ಕಲ್ಪನಾತೀತವಾದುದಾಗಿದೆ. ಇಂದಿನ ಮುಂದುವರಿದ ವಿಜ್ಞಾನ ಲೋಕದ ಪರಿಧಿಗೆ ಮಿಗಿಲಾದ ಮತ್ತು ಮೀರಿದ ಜ್ಞಾನಮತ್ತೆಯನ್ನು ನಮ್ಮ ಋಷಿಕುಲ ಪರಂಪರೆ ಸಿದ್ಧಿಸಿಕೊಂಡಿತ್ತು ಎಂದು ಸಂಘಟನಾ ಚಾತುರ್ವಸ್ಯ ದೀಕ್ಷಾಬದ್ಧ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಗುರುವಾರ ನುಡಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ನೂತನವಾಗಿ ನಿರ್ವಿುಸಲಾದ ಸಂಸ್ಕಾರ ಮಂಟಪ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಅನುಗ್ರಹಿಸಿದರು.
ಮೂಲದಲ್ಲಿ ಲಿಪಿರೂಪವಿಲ್ಲದೆ ಋಷಿಮುನಿಗಳಿಂದ ಸಂರಕ್ಷಿತವಾಗಿ ಇವತ್ತಿನ ವರೆಗೂ ಹರಿದು ಬಂದ ವೇದಸಾಹಿತ್ಯ ಅವಿನಾಶಿನಿಯಾದ, ಶಾಶ್ವತ ಸಂಪತ್ತಾಗಿದೆ ಎಂದರು.
ವಿಶ್ವವಿದ್ಯಾಪೀಠದ ಬಗ್ಗೆ ಸಮಾಜದಲ್ಲಿ ಅರಿವು ಉಂಟುಮಾಡಲು ಇಂದಿನಿಂದ ಸ್ವರ್ಣಪಾದುಕೆಗಳ ಜೈತ್ರಯಾತ್ರೆಯನ್ನು ಪ್ರಾರಂಭಿಸಲಾಗಿದೆ. ಸಮಾಜದಲ್ಲಿ ಸತ್ಪ್ರಜೆಗಳನ್ನು ಬೆಳೆಸಲು ಮತ್ತು ವಿವಿವಿಯ ಶಿಕ್ಷಣ ಕ್ಷೇತ್ರದ ಉತ್ಥಾನಕ್ಕೆ ಈ ಸಂಚಾರ ಜೈತ್ರಯಾತ್ರೆ ನಾಂದಿಯಾಗಲಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಲೋಕಾರ್ಪಣೆ ಮಾಡಿ ಮಾತನಾಡಿದ ಕೊಯಮತ್ತೂರು ವೇದ ವಿದ್ಯಾಲಯ ಪ್ರಮುಖ ವೇದಬ್ರಹ್ಮ ಶ್ರೀ ಜಂಬೂನಾಥ ಘನಪಾಠಿಗಳು, ನಿಜವಾದ ಧರ್ಮ ದೈವಾಶ್ರಿತವಾದುದಾಗಿದೆ. ಆದರೆ ಅಂತಹ ದೇವರನ್ನು ಪ್ರಕಟರೂಪದಲ್ಲಿ ಕಾಣುವ ಯೋಗ ಮತ್ತು ಆ ಶಕ್ತಿ ಸಿದ್ಧಿ ಕಷ್ಟಪ್ರದ ಕಾರ್ಯ. ಹೀಗಾಗಿ ದೇವರು ನಮಗೆ ಗುರುವರ್ಯರ ರೂಪದಲ್ಲಿ ಪ್ರಕಟವಾಗುತ್ತಾನೆ ಎಂದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಹಿರಿಯ ಕ್ಷೇತ್ರ ಪುರೋಹಿತ ವಿದ್ವಾನ್ ರಾಮಕೃಷ್ಣ ಶಂಕರಲಿಂಗ, ಪ್ರಾಚಾರ್ಯ ನೃಸಿಂಹ ಭಟ್ಟ, ವಿವಿವಿ ಗೌ.ಅಧ್ಯಕ್ಷ ದೇವಶ್ರವ ಶರ್ವ, ಹಿರಿಯ ಸಾಹಿತಿ ಗಜಾನನ ಶರ್ವ, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರ.ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಆಡಳಿತಾಧಿಕಾರಿ ಡಾ.ಟಿ.ಜಿ. ಪ್ರಸನ್ನಕುಮಾರ, ಚಾತುರ್ವಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ. ಭಟ್ಟ ಮುಂತಾದವರಿದ್ದರು. ಶಿಕ್ಷಕ ಸುಧನ್ವ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.