

ಶಿರಸಿ: ರಾಜ್ಯದ ಅರಣ್ಯ ಪ್ರದೇಶದಲ್ಲಿ ದನ, ಪ್ರಾಣಿ ಮೇಯಿಸುವುದನ್ನು ಸಂಪೂರ್ಣ ನಿಯಂತ್ರಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಅರಣ್ಯ ಸಚಿವರ ಈ ಆದೇಶವನ್ನು ಪ್ರಬಲವಾಗಿ ವಿರೋಧಿಸಲಾಗುವುದು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರು ಜಾನುವಾರಗಳನ್ನು ನಿರ್ದಿಷ್ಟ ಅರಣ್ಯ ಪ್ರದೇಶದಲ್ಲಿ ಮೇಯಿಸುವ ಹಕ್ಕನ್ನು ಹೊಂದಿರುತ್ತಾರೆ. ಶೇ. 29ರಷ್ಟು ಸಂರಕ್ಷಿತ ಅರಣ್ಯಗಳಲ್ಲಿ ಹಾಗೂ ಶೆ.18ರಷ್ಟು ವರ್ಗಿಕರಿಸದ ಅರಣ್ಯ ಪ್ರದೇಶಗಳಲ್ಲಿ ಮೇಯಿಸಲು ನಿರ್ಬಂಧಿಸುವ ಸಂಪೂರ್ಣ ಅಧಿಕಾರ ಸರ್ಕಾರಕ್ಕೆ ಇಲ್ಲ. ಸರ್ಕಾರದ ನಿಯಮ ಮತ್ತು ಅನುಮತಿ ಪ್ರಕಾರ ಮೇಯಿಸಲು ಅವಕಾಶವಿರುತ್ತದೆ. ಇಂತಹ ನಿಯಮಗಳ ಅರಣ್ಯ ಸಂರಕ್ಷಣೆ ಮಟ್ಟ ಮತ್ತು ಅರಣ್ಯ ಪ್ರಕಾರದ ಮೇಲೆ ಅವಲಂಬಿತವಾಗಿತ್ತದೆ. ಜಿಲ್ಲಾ, ಗ್ರಾಮ, ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಮುಕ್ತ ವಲಯವನ್ನು ದನ ಮೇಯಿಸುವ ಪ್ರದೇಶವೆಂದು ಗ್ರಾಮದ ಸಮಿತಿ ನಿರ್ಧರಿಸಿರುತ್ತದೆ. ಮೇಯುವಿಕೆಗೆ ಸಂಬಂಧಿಸಿ ಪ್ರಸಕ್ತ ಕಾಯ್ದೆ ಅಂಶ ಚಾಲ್ತಿಯಲ್ಲಿ ಇರುವಾಗಲೇ, ಹೊಸ ಸೂಚನೆ ನೀಡಿರುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯ್ದೆ ಅಡಿ ಅರಣ್ಯದಲ್ಲಿ ವಾಸಿಸುವ ಸಮುದಾಯಗಳಿಗೆ ಕೆಲವು ಹಕ್ಕುಗಳನ್ನು ಗುರುತಿಸಲಾಗಿದೆ. ಇದರಲ್ಲಿ ಮೇಯಿಸುವ ಹಕ್ಕನ್ನು ಸಮೂಹ ಹಕ್ಕು ಎಂದು ಗುರುತಿಸಲಾಗಿದೆ. ಇದರಿಂದಗಿ ವಿವಿಧ ಪ್ರಕಾರದ ಅರಣ್ಯ ಭೂಮಿಯಲ್ಲಿ ಜಾನುವಾರಗಳನ್ನು ಮೇಯಿಸಲು ಅವಕಾಶ ನೀಡಿದೆ. ಅಲ್ಲದೆ, ಮೇವು ಉತ್ಪನ್ನಗಳನ್ನು ಸಂಗ್ರಹಿಸಲು ಅರಣ್ಯ ಹಕ್ಕು ಕಾಯ್ದೆಯಲ್ಲಿ ಅವಕಾಶವಿದೆ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕದ ಅರಣ್ಯದಲ್ಲಿ ಸಾಕು ಪ್ರಾಣಿಗಳನ್ನು ಮೇಯಿಸುವ ಅನುಮತಿ ಕಾನೂನಾತ್ಮಕವಾಗಿ ಸಿಗುತ್ತದೆ. ಅರಣ್ಯದಲ್ಲಿ ಮೇಯಿಸುವಿಕೆಯ ಕಾನೂನಾತ್ಮಕ ಪರಿಹಾರಕ್ಕೆ ಅರಣ್ಯಸಚಿವರು ಅರಣ್ಯ ಪ್ರದೇಶದಲ್ಲಿ ವಲಯವನ್ನು ಗುರುತಿಸಬೇಕು ಎಂದು ಒತ್ತಾಯಿಸಿದ್ದಾರೆ.