

ಬಾಗಲಕೋಟೆ: ಶ್ರಾವಣ ಮಾಸದ ಕೊನೆಯ ಮಂಗಳವಾರ ತಾಲೂಕಿನ ಸುಕ್ಷೇತ್ರ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ಅಗ್ಗಿ ಉತ್ಸವ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಅಗ್ಗಿ ಉತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆ ವೀರಭದ್ರ ದೇವರಿಗೆ ವಿಶೇಷ, ರುದ್ರಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮ ಜರುಗಿತು. ಶ್ರಾವಣ ಮಾಸದ ಪ್ರತಿ ಮಂಗಳವಾರ ದೇವರಿಗೆ ತರಹೇವಾರಿ ಅಲಂಕಾರ ಮಾಡಲಾಯಿತು. ಅಗ್ಗಿ ಉತ್ಸವದಂದು ಕೂಡ ವೀರಭದ್ರ ದೇವರಿಗೆ ಸುಂದರ ಅಲಂಕಾರ ಮಾಡಲಾಗಿತ್ತು. ರಾತ್ರಿ ದೇವಸ್ಥಾನಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರ ಗಮನ ಸೆಳೆಯಿತು.
ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಭಕ್ತರು ನಸುಕಿನ ಜಾವದಿಂದಲೇ ಆಗಮಿಸಿ ಸರಿದಿಯಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದರು. ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಭಕ್ತರು ದರ್ಶನವನ್ನು ಪಡೆಯುವ ಮೂಲಕ ಪುನೀತರಾದರು.
ಗ್ರಾಮದ ಮಹಿಳೆಯರು ಆರುತಿ ಹಾಗೂ ಸಕಲ ವಾಧ್ಯ ವೈಭವಗಳೊಂದಿಗೆ ಸಂಜೆಯಾಗುತ್ತಿದ್ದಂತೆ ದೇವಸ್ಥಾನದಿಂದ ಚಿಕ್ಕರಥೋತ್ಸವ ನಡೆಯಿತು. ರಥೋತ್ಸವ ದೇವಸ್ಥಾನದಿಂದ ಗ್ರಾಮದ ಅಗಸಿ ಬಾಗಿಲಿನವರಿಗೆ ಸಾಗಿ ಮರಳಿ ಸ್ವ ಸ್ಥಾನ ತಲುಪಿತು. ರಸ್ತೆಯ ಇಕ್ಕೆಲುಗಳಲ್ಲಿ ನಿಂತ ಭಕ್ತ ಸಮೂಹ ರಥಕ್ಕೆ ಉತ್ತತ್ತಿ, ಚುರುಮುರಿ, ಬಾಳೆ ಹಣ್ಣು ಅರ್ಪಿಸುವ ಮೂಲಕ ಭಕ್ತಿಯನ್ನು ಸಮರ್ಪಿಸಲಾಯಿತು.
ರಥೋತ್ಸವ ದೇವಸ್ಥಾನ ತಲುಪುತ್ತಿದ್ದಂತೆ ದೇವಸ್ಥಾನ ಮುಂಭಾಗದಲ್ಲಿ ನಡೆಯುವ ಅಗ್ಗಿ ಕುಂಡದಲ್ಲಿ ಭಕ್ತರು ಒಂದೆಡೆ ಸೇರಿದ ಬಳಿಕ ಮೊದಲು ಪುರವಂತರು, ಪಲ್ಲಕ್ಕಿಯನ್ನು ಹೊತ್ತವರು ಹಾಗೂ ಆರುತಿಯೊಂದಿಗೆ ಮಹಿಳೆಯರು ಹಾಗೂ ಭಕ್ತರು ಸರದಿಯಲ್ಲಿ ನಿಂತು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಅಗ್ಗಿ ಹಾಯ್ದರು.