

ವೀರಾಪುರ ಕೃಷ್ಣ ಗಂಗಾವತಿ
ಸಣಾಪುರದಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ-ಕೊಲೆ ಘಟನೆ ಹಿನ್ನೆಲೆಯಲ್ಲಿ ಆನೆಗೊಂದಿಗೆ ಬರುವ ಪ್ರವಾಸಿಗರು ಮತ್ತು ವಿದೇಶಿಗರ ಸುರಕ್ಷತೆ ಹಿನ್ನೆಲೆಯಲ್ಲಿ ಕಡೇಬಾಗಿಲು ಬಳಿ ಪೊಲೀಸ್ ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, ಅದರಲ್ಲಿ ಸೌಲಭ್ಯಗಳ ಕೊರತೆಗಳ ನಡುವೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾ ಒದ್ದಾಡುತ್ತಿದ್ದಾರೆ.
ನಿತ್ಯವೂ ಪೊಲೀಸ್, ಹೋಮ್ ಗಾರ್ಡ್ ಸೇರಿದಂತೆ ಆರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಆದರೆ, ಕೋಳಿ ಗೂಡಿನಂತಹ ಶೆಡ್‌ನಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಲ್ಲಿ ರಕ್ಷಣೆಯಿಲ್ಲವಾಗಿದೆ. ಟೇಬಲ್, ಎರಡು ಚೇರ್‌ಗಳು ಹೊರತುಪಡಿಸಿದರೆ ಬೇರ‌್ಯಾವ ವ್ಯವಸ್ಥೆಯಿಲ್ಲ. ಮುಖ್ಯರಸ್ತೆಯಲ್ಲಿ ಚೆಕ್‌ಪೋಸ್ಟ್ ಇದ್ದರೂ ಹಿಂಭಾಗದಲ್ಲಿ ಗುಡ್ಡಗಾಡು ಪ್ರದೇಶವಿದೆ. ರಾತ್ರಿಯಾಗುತ್ತಿದ್ದಂತೆ ಕರಡಿ, ಚಿರತೆ ಮತ್ತು ಇತರೆ ಪ್ರಾಣಿಗಳ ಕಾಟವಿದೆ. ಅಗಾಗ್ಗೆ ಹಾವು, ಚೇಳುಗಳು ಶೆಡ್‌ನಲ್ಲಿ ನುಸುಳುತ್ತಿವೆ. ತಗಡಿನ ಶೆಡ್‌ನಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಮಧ್ಯಾಹ್ನ ಬಯಲಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಿಜಿಸ್ಟ್ರರ್, ದಾಖಲೆಗಳನ್ನಿಡಲು ವ್ಯವಸ್ಥೆಯಿಲ್ಲ. ನೆಲಹಾಸು ಕಿತ್ತು ಹೋಗಿದ್ದು, ವಿಷ ಜಂತುಗಳು ಹೊರಬರುತ್ತಿವೆ. ತಾತ್ಕಾಲಿಕ ವಿದ್ಯುತ್ ಸಂಪರ್ಕ ಮಾತ್ರ ಇಲ್ಲಿದ್ದು, ದಿನದಲ್ಲಿ 12 ಗಂಟೆ ವಿದ್ಯುತ್ ಸಿಕ್ಕರೆ ಅದೇ ಪುಣ್ಯ. ಪ್ರವಾಸಿಗರಿಗೆ ಸುರಕ್ಷತೆ ಬಯಸುವ ಕರ್ತವ್ಯ ಸಿಬ್ಬಂದಿಗೇ ಸುರಕ್ಷತೆ ಭೀತಿ ಎದುರಾಗಿದೆ.
ಬೇಕಿದೆ ಶಾಶ್ವತ ಕಟ್ಟಡ
ಹಂಪಿಯಷ್ಟೇ ಪ್ರಾಮುಖ್ಯತೆ ಪಡೆದ ಆನೆಗೊಂದಿಗೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಿದ್ದು, ವಿದೇಶಿಗರು ಒಬ್ಬಂಟಿಯಾಗಿ ಹಗಲು-ರಾತ್ರಿ ತಿರುಗಾಡುತ್ತಿದ್ದಾರೆ. ಅಂಜನಾದ್ರಿ, ನವವೃಂದಾವನಗಡ್ಡಿ, ಪಂಪಾಸರೋವರ ವೀಕ್ಷಣೆಗೆ ಉತ್ತರ ಭಾರತದಿಂದ ಪ್ರವಾಸಿಗರ ದಂಡೇ ಬರುತ್ತಿದೆ. ಇಂಥ ಪ್ರದೇಶದಲ್ಲಿರುವ ಚೆಕ್ ಪೋಸ್ಟ್‌ಗೆ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಹೆಚ್ಚುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆನೆಗೊಂದಿ ಸದ್ದು ಮಾಡಿದ್ದು, ನಿಯಂತ್ರಣಕ್ಕೆ ಶಾಶ್ವತ ಚೆಕ್‌ಪೋಸ್ಟ್ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರು.
ಗಮನ ಹರಿಸಬೇಕಿದೆ ಜಿಲ್ಲಾಡಳಿತ
ಚುನಾವಣೆ ಸಂದರ್ಭ ಮಾತ್ರ ಚೆಕ್‌ಪೋಸ್ಟ್‌ಗೆ ಆದ್ಯತೆ ನೀಡುವ ಜಿಲ್ಲಾಡಳಿತ ನಂತರ ದಿನಗಳಲ್ಲಿ ಗಮನಹರಿಸುತ್ತಿಲ್ಲ. ಕೋವಿಡ್ ಸಂದರ್ಭ ಚೆಕ್‌ಪೋಸ್ಟ್ ಇದ್ದರೂ ಮೂಲ ಸೌಕರ್ಯ ಒದಗಿಸಿರಲಿಲ್ಲ. ಪ್ರವಾಸಿಗರ ಸುರಕ್ಷತೆ ಹಿನ್ನೆಲೆಯಲ್ಲಿ ಆರಂಭಿಸಿರುವ ಚೆಕ್‌ಪೋಸ್ಟ್‌ಗೆ ಮೂಲ ಸೌಕರ್ಯ ಒದಗಿಸಬೇಕಿದ್ದು, ಶಾಶ್ವತ ಕಟ್ಟಡದ ವ್ಯವಸ್ಥೆಯಾಗಬೇಕಿದೆ. ಜನರಿಗೆ ಭದ್ರತೆ ಒದಗಿಸುವ ಪೊಲೀಸ್ ಸಿಬ್ಬಂದಿಗೆ ಚೆಕ್‌ಪೋಸ್ಟ್‌ನಿಂದಲೇ ಅಭದ್ರತೆ ಕಾಡುತ್ತಿದೆ. ಹಗಲು-ರಾತ್ರಿ ಕಾಯುವ ಸಿಬ್ಬಂದಿಗೂ ಕುಟುಂಬವಿದ್ದು, ವೈಯಕ್ತಿಕ ಬದುಕಿದೆ. ಈ ಕಾರಣಕ್ಕಾದರೂ ಚೆಕ್‌ಪೋಸ್ಟ್‌ಗೆ ಭದ್ರತೆ ಜತೆಗೆ ಮೂಲ ಸೌಕರ್ಯಗಳು ಲಭಿಸಬೇಕಿದೆ.
ಚೆಕ್‌ಪೋಸ್ಟ್ ನಿರ್ವಹಣೆ ಜವಾಬ್ದಾರಿ ಪೊಲೀಸ್ ಇಲಾಖೆಗಿದೆ. ಆದರೂ ಕುಡಿವ ನೀರು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಶಾಶ್ವತ ವ್ಯವಸ್ಥೆ ಆಗಬೇಕಾದರೆ ಇಲಾಖೆಯವರೂ ಗ್ರಾಪಂಗೆ ಪ್ರಸ್ತಾವನೆ ಸಲ್ಲಿಸಿದರೆ ಗ್ರಾಪಂ ಆಡಳಿತ ಮಂಡಳಿ ಗಮನಕ್ಕೆ ತರಲಾಗುವುದು. ರವೀಂದ್ರ ಕುಲ್ಕರ್ಣಿ ಪ್ರಭಾರ ಪಿಡಿಒ, ಆನೆಗೊಂದಿ. ಕಡೇಬಾಗಿಲು ಚೆಕ್‌ಪೋಸ್ಟ್‌ಗೆ ಮೂಲಸೌಕರ್ಯ ಒದಗಿಸಬೇಕಿದ್ದು, ಪ್ರವಾಸಿಗರು ಮತ್ತು ವಿದೇಶಿಗರ ಸುರಕ್ಷತೆಗೆ ನಿಯೋಜನೆಗೊಂಡ ಅಲ್ಲಿನ ಸಿಬ್ಬಂದಿಗೆ ಮೊದಲು ಭದ್ರತೆ ಸಿಗಬೇಕಿದೆ. ಶಾಶ್ವತ ಕಟ್ಟಡದ ಜತೆಗೆ ಮೂಲ ಸೌಕರ್ಯ ಒದಗಿಸಲು ಜಿಲ್ಲಾಡಳಿತ ಮುಂದಾಗಲಿ. ಬಸವರಾಜ ಮ್ಯಾಗಳಮನಿ ಜಿಲ್ಲಾಧ್ಯಕ್ಷ, ಸರ್ವಾಂಗೀಣ ಜಿಲ್ಲಾಭಿವೃದ್ಧಿ ಹೋರಾಟ ಸಮಿತಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ತಾತ್ಕಾಲಿಕ ಚೆಕ್‌ಪೋಸ್ಟ್ ಹಾಕಿದ್ದು, ಸಿಸಿ ಕ್ಯಾಮರಾ ವ್ಯವಸ್ಥೆಯಿದೆ. ಮೂಲ ಸೌಕರ್ಯ ಕೊರತೆಯಿದ್ದು, ಶಾಶ್ವತ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿ ರಕ್ಷಣೆಗೂ ಒತ್ತು ನೀಡಲಾಗುವುದು. ರಂಗಪ್ಪ ಎಚ್.ದೊಡ್ಮನಿ ಗ್ರಾಮೀಣ ಪಿಐ