ಭಾಷೆ ಬೇರೆಯಾದರು ಭಾವನೆ ಒಂದೇ

12 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಾವೆಲ್ಲರೂ ಒಂದಾಗಿ ಸದೃಢ ರಾಷ್ಟ್ರ ನಿರ್ಮಿಸಿ ಗಾಂಧೀಜಿಯ ಸ್ವಚ್ಛ ಭಾರತದ ಕನಸು ನನಾಗಿಸೋಣ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಅಧಿಕಾರಿ ಡಾ. ಪ್ರತಾಪ ಲಿಂಗಯ್ಯ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯ ಆವರಣದ ಮಾನಸೋಲ್ಲಾಸ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶ ಹಾಗೂ ಕವಿವಿ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಾತಿ- ಜಾತಿಗಳ ನಡುವಿನ ಕೋಮುವಾದ ತಡೆಯೋಣ. ಈ ರಾಷ್ಟ್ರೀಯ ಭಾವೈಕ್ಯತೆ ಶಿಬಿರ ಒಂದು ಚಿಕ್ಕ ರಾಷ್ಟ್ರದಂತೆ ಕಾಣಬಹುದಾಗಿದೆ. ಎಲ್ಲ ರಾಜ್ಯಗಳ ಮಾತೃ ಭಾಷೆಗಳನ್ನು ಕಲಿಯಲು ಉತ್ತಮ ಅವಕಾಶ. ಭಾಷೆ ಬೇರೆಯಾದರು ಭಾವನೆ ಮಾತ್ರ ಒಂದೇ ಆಗಿದೆ ಎಂದರು.
ನಾವೆಲ್ಲರೂ ಒಂದಾಗಿ ಬಾಳುವುದಕ್ಕಾಗಿ ರಾಷ್ಟ್ರೀಯ ಭಾವೈಕ್ಯತೆ ಶಿಬಿರ ಆಯೋಜಿಸಲಾಗಿದೆ. ರಾಜ್ಯ ಸರ್ಕಾರ ಪ್ರತಿ ವರ್ಷ 10 ರಾಷ್ಟ್ರೀಯ ಭಾವೈಕ್ಯತೆ ಶಿಬಿರ ಹಾಗೂ 4 ಯುವ ಜನೋತ್ಸವ ಕಾರ್ಯಕ್ರಮಕ್ಕೆ ಅನುದಾನ ನೀಡಲಿದೆ. ಇಂತಹ ಅನುದಾನವನ್ನು ಯಾವ ರಾಜ್ಯದಲ್ಲಿ ಇಷ್ಟು ನೀಡುತ್ತಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಹಣಕಾಸು ಅಧಿಕಾರಿ ಡಾ. ಸಿ.ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ರಾಷ್ಟ್ರ ಬಲಿಷ್ಠವಾಗಿ ಕಟ್ಟೋಣ. ನಮ್ಮ ದೇಶದ ಸಂಸ್ಕೃತಿ, ಭಾಷೆ, ಉಡುಗೆ ತೊಡುಗೆ ವಿಭಿನ್ನವಾಗಿದ್ದರೂ ನಾವೆಲ್ಲ ಒಂದೇ. ಉತ್ತಮ ನಾಯಕತ್ವ ಗುಣ ರೂಪಿಸಿಕೊಳ್ಳಲು ಈ ಶಿಬಿರ ಸಹಕಾರಿಯಾಗಿದೆ ಎಂದರು.
ಡಾ.ನಾಗರಾಜ ಗುದಾಗನವರ, ಡಾ.ಎಫ್.ಎಚ್. ನದಾಫ್, ಡಾ. ಎಸ್.ಎಸ್. ಮಂಗಳವಾಡಿ, ಆಸೀಫ್ ತೊರಗಲ್, ಡಾ. ಸಲೀಂ ಕೋಳೂರು, ಡಾ. ನಾಗರಾಜ ತಳವಾರ, ಎಸ್.ಎಂ. ಕೊಟಬಾಗಿ, ಹಿರಿಯ ಸ್ವಯಂ ಸೇವಕರು, ಗೋವಾ, ಮಧ್ಯಪ್ರದೇಶ, ಗುಜರಾತ, ತಮಿಳುನಾಡು, ತೆಲಂಗಾಣ ಹಾಗೂ ರಾಜ್ಯದ ವಿವಿಧ ವಿವಿಗಳ 150ಕ್ಕೂ ಹೆಚ್ಚು ಎನ್‌ಎಸ್‌ಎಸ್ ಸ್ವಯಂ ಸೇವಕರು ಪಾಲ್ಗೊಂಡಿದ್ದರು.
ಕವಿವಿ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಕಾರ್ಯಕ್ರಮ ಸಂಯೋಜಕ ಡಾ.ಎಂ.ಬಿ.ದಳಪತಿ ಸ್ವಾಗತಿಸಿದರು. ಡಾ. ಮಧುಶ್ರೀ ನಿರೂಪಿಸಿದರು. ಡಾ. ಜಯನಂದ ಹಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net