ಶ್ರೀರಾಮಲಲ್ಲಾ ಶಿಲೆ ದೊರೆತ ಜಮೀನು ಈಗ ಪೂಜಾ ಸ್ಥಳ

18
Published on

ಮೈಸೂರು: ಆಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ಶ್ರೀರಾಮನ ಮೂರ್ತಿಯನ್ನು ಕೆತ್ತನೆ ಮಾಡಲು ಕೃಷ್ಣಶಿಲೆ ದೊರೆತ ಜಮೀನು ಈಗ ಪೂಜಾ ಸ್ಥಳವಾಗಿದೆ.
ರಾಮನ ವಿಗ್ರಹವನ್ನು ಕೆತ್ತನೆ ಮಾಡಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು, ಹಾರೋಹಳ್ಳಿ ಬಳಿಯ ಗುಜ್ಜೇಗೌಡನ ಪುರದ ರಾಮದಾಸ್ ಅವರ ಜಮೀನಿನಲ್ಲಿ ದೊರೆತ ಕೃಷ್ಣಶಿಲೆಯನ್ನು ಆಯ್ಕೆ ಮಾಡಿಕೊಂಡು ಬಾಲ ರಾಮನಮೂರ್ತಿ ಕೆತ್ತನೆ ಮಾಡಿದ್ದರು.
ಈಗ ಆಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲು ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವ ಬಾಲರಾಮನ ಮೂರ್ತಿ ಆಯ್ಕೆಯಾಗಿರುವುದರಿಂದ ಜಮೀನಿನ ಮಾಲೀಕ ಸೇರಿದಂತೆ ಇತರರು ಸಂತಸಗೊಂಡಿದ್ದಾರೆ. ಅಲ್ಲದೆ, ಶಿಲೆ ಸಿಕ್ಕ ಜಾಗದಲ್ಲಿ ಶ್ರೀರಾಮನ ಫೋಟೋ ಇಟ್ಟು, ಅಲಂಕಾರ ಮಾಡಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ಮೈಸೂರು ಅರಮನೆಯ ಪುರೋಹಿತ ಪ್ರಹ್ಲಾದ್‌ರಾವ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.
ನೂರಾರು ಭಕ್ತರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಜಯಘೋಷದೊಂದಿಗೆ ರಾಮದೇವರ ಭಾವಚಿತ್ರಕ್ಕೆ ವಿಶೇಷ ಅಲಂಕಾರ ಮಾಡಿ, ಹೋಮ ನೆರವೇರಿಸಲಾಯಿತು. ಈ ವೇಳೆ ಭಕ್ತರಿಗೆ ಪಾನಕ, ಮಜ್ಜಿಗೆ, ಸಿಹಿ ವಿತರಿಸಲಾಯಿತು.
ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮನಮೂರ್ತಿಗೆ ನಮ್ಮ ಜಮೀನಿನ ಶಿಲೆಯನ್ನು ಬಳಸಿರುವುದು ಹೆಮ್ಮೆ ತಂದಿದೆ. ರಾಮನೇ ನಮ್ಮ ಜಮೀನಿನಲ್ಲಿದ್ದ ಎನ್ನುವ ಭಾವನೆ ನಮ್ಮಲ್ಲಿ ಮೂಡಿದೆ. ಗಣಿ ಗುತ್ತಿಗೆದಾರ ಗುಜ್ಜೇಗೌಡನಪುರ ಶ್ರೀನಿವಾಸ್ ಅವರಿಗೆ ಕಲ್ಲು ತೆಗೆಯುವ ಗುತ್ತಿಗೆ ನೀಡಲಾಗಿತ್ತು. ಯೋಗಿರಾಜ್ ಅವರು ಇಲ್ಲಿನ ಕಲ್ಲು ಆಯ್ಕೆ ಮಾಡಿಕೊಂಡಿದ್ದು ಸಂತೋಷವಾಗಿದೆ ಎಂದು ಜಮೀನಿನ ಮಾಲೀಕ ರಾಮದಾಸ್, ಪುತ್ರ ರಂಗಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ರೇವಣ್ಣ, ಸತೀಶ್,ವೆಂಕಟೇಶ್, ಮುಖಂಡರಾದ ಮಲ್ಲಿಕಾರ್ಜುನಪ್ಪ, ಮುಖಂಡರಾದ ಚನ್ನಕೇಶವಗೌಡ, ಮಧು ಕೇಶವಗೌಡ, ವೆಂಕಟೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net