

ಲಕ್ಷ್ಮೇಶ್ವರ: ಆರು ದಶಕಗಳಿಂದ ಪಟ್ಟಣದಲ್ಲಿ ನಗರ ಭೂಮಾಪನ ಕಚೇರಿ ಕಾರ್ಯನಿರ್ವಹಿಸುತ್ತಿದ್ದರೂ ಸ್ವಂತ ಕಟ್ಟಡ ಭಾಗ್ಯವೂ ಇಲ್ಲ ಮತ್ತು ಪೂರ್ಣಪ್ರಮಾಣದ ಸಿಬ್ಬಂದಿಯೂ ಇಲ್ಲದೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
50 ಸಾವಿರ ಜನಸಂಖ್ಯೆ ಹೊಂದಿರುವ ತಾಲೂಕು ಕೇಂದ್ರದಲ್ಲಿ 15 ಸಾವಿರದಷ್ಟು ಆಸ್ತಿಗಳಿವೆ. ಪಂಪ ಸರ್ಕಲ್ ಹತ್ತಿರ 8 ಗುಂಟೆ ನಿವೇಶನವಿದ್ದರೂ ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಸ್ವಂತ ಕಟ್ಟಡದ ಭಾಗ್ಯ ಕಾಣದೆ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಖಾಲಿ ಬಿದ್ದಿರುವ ನಿವೇಶನದಲ್ಲಿ ಮುಳ್ಳುಕಂಟಿಗಳು ಬೆಳೆದಿವೆ.
ಸಿಬ್ಬಂದಿ ಕೊರತೆ: ತಾಲೂಕು ಕೇಂದ್ರದಲ್ಲಿನ ಭೂಮಾಪನ ಕಚೇರಿಯಲ್ಲಿ ಒಬ್ಬರು ಸರ್ವೇಯರ್, ಒಬ್ಬ ಸಹಾಯಕ ಇದ್ದಾರೆ. ಕಚೇರಿಗೆ ಇಬ್ಬರು ಸರ್ವೇಯರ್, ಇಬ್ಬರು ಸಹಾಯಕರು, ಒಬ್ಬ ಕ್ಲರ್ಕ್ ಅಗತ್ಯವಿದೆ. ಸರ್ವೇ ಕಾರ್ಯಕ್ಕೆ ಹೊರಗೆ ಹೋದರೆ ಕಚೇರಿಗೆ ಬೀಗ ಹಾಕಬೇಕಾಗುತ್ತದೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡಬೇಕೆಂದರೆ ಆಸ್ತಿಯ ಸರ್ವೇ ಮಾಡಲಾಗುತ್ತಿಲ್ಲ. ತೀವ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣದಲ್ಲಿ ನಿತ್ಯವೂ ನೂರಾರು ಜನರು ಕಚೇರಿ ಕೆಲಸಕ್ಕಾಗಿ ಅಲೆದಾಡುವಂತಾಗಿದೆ.
ಲಕ್ಷ್ಮೇಶ್ವರ ಭೂಮಾಪನ ಕಚೇರಿಗೆ ಹೆಚ್ಚುವರಿ ಸಿಬ್ಬಂದಿ ಕಲ್ಪಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆಯೂ ಜಾರಿಯಲ್ಲಿದೆ.-ರಮೇಶ ಕೆ.ಎನ್. ಭೂದಾಖಲೆಗಳ ಸಹಾಯಕ ನಿರ್ದೇಶಕರು. ಪಟ್ಟಣವು ತಾಲೂಕು ಕೇಂದ್ರವಾಗಿದ್ದು, ಶೈಕ್ಷಣಿಕ, ಔದ್ಯೋಗಿಕವಾಗಿ, ವ್ಯಾವಹಾರಿಕವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದ್ದರಿಂದ ಭೂಮಾಪನ ಕಚೇರಿಗೆ ಅಗತ್ಯ ಸಿಬ್ಬಂದಿ ಕಲ್ಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಗಮನ ಹರಿಸಬೇಕು.-ಮಂಜುನಾಥ ಮಾಗಡಿ, ನಾಗರಿಕ