ಸ್ಮಶಾನಕ್ಕೆ ಬೇಕಿರುವ ಭೂಮಿ ಕಾಯ್ದಿರಿಸಲಾಗಿದೆ; ಡಿಸಿ

29adarshkdga4
Published on

ಮಡಿಕೇರಿ: ಜಿಲ್ಲೆಯಲ್ಲಿ ನೋಕ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ ಸ್ಮಶಾನಕ್ಕೆ ಬೇಕಿರುವ ಭೂಮಿಯನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಸಂಬಂಧ ಆಯೋಜಿಸಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಜಿಲ್ಲೆಯಲ್ಲಿ ಒಂದೆರಡು ಗ್ರಾಮ ಹೊರತುಪಡಿಸಿ ಎಲ್ಲಾ ಕಂದಾಯ ಗ್ರಾಮಗಳಲ್ಲಿಯೂ ಸಹ ಸ್ಮಶಾನಕ್ಕಾಗಿ ಭೂಮಿ ಕಾಯ್ದಿರಿಸಲಾಗಿದೆ. ಹಾಗೆಯೇ ಪ್ರತೀ ಗುರುವಾರ ಕಂದಾಯ ಅಧಿಕಾರಿಗಳ ಸಭೆ ನಡೆಸಲಾಗುತ್ತಿದ್ದು, ಅಂಗನವಾಡಿ, ಶಾಲಾ-ಕಾಲೇಜುಗಳ ದಾಖಲೆಗಳನ್ನು ಸರಿಪಡಿಸುವುದು. ಗ್ರಾ.ಪಂ.ಕಟ್ಟಡ ಸೇರಿದಂತೆ ಅಗತ್ಯವಿರುವ ಕಡೆ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಲು ಮುಂದಾಗಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಹೇಳಿದರು.


ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಪಿ.ಪಿ.ಸುಕುಮಾರ್ ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ಕಲ್ಪಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಸಂಬಂಧ ಪ್ರತೀ ಪೊಲೀಸ್ ಠಾಣೆಗಳಲ್ಲಿ ಕಾಲಕಾಲಕ್ಕೆ ಸಭೆ ನಡೆಸಬೇಕು ಎಂದು ಮನವಿ ಮಾಡಿದರು.


ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ೧೧ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದೆ ಎಂದು ತಿಳಿಸಿದರು.


ಅರುವತ್ತೋಕ್ಲು ಗ್ರಾ.ಪಂ.ವ್ಯಾಪ್ತಿಯ ಕಾರೆಕಾಡು ಗಿರಿಜನ ಕಾಲೋನಿಯಲ್ಲಿ ೯ ಕುಟುಂಬಗಳು ವಾಸಿಸುತ್ತಿದ್ದು, ವೈಯಕ್ತಿಕ ಶೌಚಾಲಯ ನಿರ್ಮಾಣ ಸಂಬಂಧ ತಾ.ಪಂ.ಇಒ ಅವರು ಸ್ಥಳ ಪರಿಶೀಲಿಸಿ ವರದಿ ನೀಡಬೇಕು.

ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದಂತೆ ೮೬೩ ಪ್ರಕರಣಗಳು ಊರುಡುವೆ ಜಮೀನಿನ ನಿಬಂಧನೆ ೯೪ ಸಿ ರಡಿ ಹಕ್ಕು ಪತ್ರ ಕೋರಿ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸುವಂತೆ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.


ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಸಮಿತಿ ಸದಸ್ಯ ಜಾಯ್ಸ ಮೆನೇಜಸ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net