ದೇಗುಲದ ಜಾಗ ಅರ್ಚಕರ ಹೆಸರಿಗೆ ಅಕ್ರಮವಾಗಿ ಖಾತೆ

SRP_11-03jpj
Published on


ಶ್ರೀರಂಗಪಟ್ಟಣ: ತಾಲೂಕಿನ ಅಚ್ಚಪ್ಪನಕೊಪ್ಪಲು ಗ್ರಾಮದಲ್ಲಿ ದೇಗುಲದ ಜಾಗವನ್ನು ಅರ್ಚಕರೊಬ್ಬರು ತಮ್ಮ ಹೆಸರಿಗೆ ಅಕ್ರಮವಾಗಿ ಖಾತೆೆ ಮಾಡಿಸಿಕೊಂಡಿದ್ದು, ಈ ಬಗ್ಗೆ ಪರಿಶೀಲಿಸಿ ಖಾತೆ ವಜಾಗೊಳಿಸುವಂತೆ ತಹಸೀಲ್ದಾರ್‌ಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.


ಪಟ್ಟಣದ ತಾಲೂಕು ಕಚೇರಿಗೆ ಸೋಮವಾರ ಗ್ರಾಮಸ್ಥರು ಹಾಗೂ ಮುಖಂಡರು ಭೇಟಿ ನೀಡಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರಿಗೆ ಮನವಿ ಸಲ್ಲಿಸಿ, ಅಕ್ರಮ ಖಾತೆ ಮಾಡಿಸಿಕೊಂಡಿರುವ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.


ಅಚ್ಚಪ್ಪನಕೊಪ್ಪಲು ಗ್ರಾಮದಲ್ಲಿರುವ ಪುರಾತನ ಆಂಜನೇಯಸ್ವಾಮಿ ದೇಗುಲಕ್ಕೆ ಸೇರಿದ ಸರ್ವೇ ನಂ.152ರಲ್ಲಿ 16 ಗುಂಟೆ, ಸರ್ವೇ ನಂ.02ರಲ್ಲಿನ 21 ಗುಂಟೆ ಹಾಗೂ ಸರ್ವೇ 02ರಲ್ಲಿ 38 ಗುಂಟೆ ಜಮೀನನ್ನು ಈ ಹಿಂದೆ ಇದ್ದ ಅರ್ಚಕ ವೆಂಕಟಸುಬ್ಬಾ ಜೋಯಿಸ್ ಅವರು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಖಾತೆ ಜತೆಗೆ ಅನ್ಯಕ್ರಾಂತ ಮಾಡಿಕೊಂಡಿದ್ದಾರೆ ಎಂದು ದೂರಿದರು.


ಸರ್ವೇ ನಂ.152ರ 16 ಗುಂಟೆ ಜಮೀನಿನಲ್ಲಿ ಶ್ರೀ ಆಂಜನೇಯಸ್ವಾಮಿ ದೇಗುಲವಿದ್ದು, ಇಲ್ಲಿನ ಸ್ಥಳದಲ್ಲೇ ಸರ್ಕಾರದಿಂದ ಸಮುದಾಯ ನಿರ್ಮಾಣ ಜತೆಗೆ ದೇವಾಲಯದ ಸುತ್ತಲು ಗ್ರಾಮ ಪಂಚಾಯಿತಿ ವತಿಯಿಂದ ಕಾಂಪೌಂಡ್ ಹಾಕಿ, ಕುಡಿಯುವ ನೀರಿನ ಟ್ಯಾಂಕ್ ಸಹ ನಿರ್ಮಿಸಲಾಗಿದೆ. ಇದರೊಂದಿಗೆ ಈ ಸ್ಥಳದಲ್ಲಿ ಕೃಷಿ ಸಹಾಯಕರ ಕಚೇರಿ, ಕಿರು ನೀರು ಸರಬರಾಜು ಘಟಕ ಸೇರಿದಂತೆ ಪಕ್ಕದಲ್ಲೇ ದೇವಾಲಯದ ಕೊಳವಿದೆ. ಪ್ರಸ್ತುತ ಇರುವ ಅರ್ಚಕ ಪ್ರಸನ್ನ ಅವರು ಸರ್ವೇ ನಂ.152ರ 16 ಗುಂಟೆ ಜಮೀನು ಗ್ರಾಮಕ್ಕೆ ಸೇರಿದೆ ಎಂದು ಬರೆದುಕೊಟ್ಟಿದ್ದರು. ಆದರೆ ಈಗ ಜಮೀನು, ದೇವಾಲಯ ಎಲ್ಲ ನಮಗೆ ಸೇರಿದೆ ಎಂದು ಹೇಳುತ್ತಿದ್ದು, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಅಕ್ರಮ ಖಾತೆ ರದ್ದುಪಡಿಸುವ ಜತೆಗೆ ಜಮೀನನ್ನು ಗ್ರಾಮದ ಜನರ ಉಪಯೋಗಕ್ಕೆ ಬಿಡಿಸಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಕೋರಿದರು.


ಗ್ರಾಮಸ್ಥರ ಮನವಿ ಆಲಿಸಿದ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಗ್ರಾಮದ ಯಜಮಾನರಾದ ಪಟೇಲ್ ಬೋರೇಗೌಡ, ಕೃಷ್ಣೇಗೌಡ, ನಾರಾಯಣ, ಬಸವರಾಜು, ತಮ್ಮಣ್ಣ, ಕರಿಗೌಡ, ಕುಮಾರ್, ಲೋಕೇಶ್, ರಮೇಶ್, ದರಸಗುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ರವಿಲಕ್ಷ್ಮಣ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net