

ಬ್ಯಾಡಗಿ: ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಿ ಭೂಸ್ವಾಧೀನ ಪ್ರಕ್ರಿಯೆಗೆ ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. ಸ್ಥಳೀಯ ಹೋರಾಟಗಾರರು ಹಾಗೂ ಸಾರ್ವಜನಿಕರು ಸಹಕರಿಸಿ ಪ್ರತಿಭಟನೆ ಕೈಬಿಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ದಾನಮ್ಮನವರ ಮನವಿ ಮಾಡಿದರು.
ರಸ್ತೆ ಅಗಲೀಕರಣ ಹೋರಾಟ ಸಮಿತಿ ಹಾಗೂ ಮೆಣಸಿನಕಾಯಿ ವರ್ತಕರ ಸಂಘ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ಬ್ಯಾಡಗಿ ಮುಖ್ಯರಸ್ತೆ ಕುರಿತು ಅಂಗಡಿಗಳ ಮಾಲೀಕರೊಂದಿಗೆ ಸಂಧಾನ ಯತ್ನ ಈ ಹಿಂದೆ ನಡೆದಿತ್ತು. ಆದರೆ, ಮಾತುಕತೆ ವಿಫಲವಾಗಿರುವುದು ತಿಳಿದುಬಂದಿದೆ. ಇನ್ಮುಂದೆ ಕಾನೂನಾತ್ಮಕವಾಗಿ ನಾವು ರಸ್ತೆ ವಿಸ್ತರಣೆಗೆ ಚಾಲನೆ ನೀಡುತ್ತೇವೆ. ಆದರೆ, ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆಯಿರುವ ಹಿನ್ನೆಲೆಯಲ್ಲಿ ನಮಗೂ ನಾಲ್ಕು ತಿಂಗಳ ಕಾಲಾವಕಾಶ ಅಗತ್ಯವಾಗಿದೆ. ಈಗಲೇ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದರೂ ಕನಿಷ್ಠ 3-4 ತಿಂಗಳ ಕಾಲ ಬೇಕಿದೆ. ಸ್ವಲ್ಪ ಸಮಯ ಕೊಡಿ, ನಾನೇ ಖುದ್ದಾಗಿ ವಿಶೇಷ ಪ್ರಕಣವೆಂದು ಪರಿಗಣಿಸಿ, ಪ್ರತಿದಿನ ಅಪ್‌ಡೇಟ್ ಮಾಡುವೆ. ಹೀಗಾಗಿ ಹೋರಾಟ ಕೈಬಿಡುವಂತೆ ಮನವಿ ಮಾಡಿದರು.
ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಮಾತನಾಡಿ, ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯನ್ನು ಅಂತಾರಾಷ್ಟ್ರೀಯ ಸ್ಥಾನಕ್ಕೇರುವಂತೆ ಅಭಿವೃದ್ಧಿಪಡಿಸಿದ್ದೇವೆ. ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಬಂದುಹೋಗಲು ಗುಣಮಟ್ಟದ ರಸ್ತೆಯಿಲ್ಲವಾಗಿದೆ. ಕೆಲವರು ನ್ಯಾಯಾಲಯಲದಲ್ಲಿ ದಾವೆ ಹೂಡಿ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ತಮ್ಮ ನೇತೃತ್ವದಲ್ಲಿ ಸಭೆ ಆಯೋಜಿಸಿ ಅಭಿಪ್ರಾಯ ತಿಳಿದುಕೊಂಡು ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕು. ಬ್ಯಾಡಗಿ ಜನತೆಗೆ ಸುಸಜ್ಜಿತ ರಸ್ತೆ ನಿರ್ಮಿಸಿಕೊಡಿ ಎಂದರು.
ಕಾರ್ಯಾದೇಶ ಕೊಡಲು ಆಗ್ರಹ
15 ವರ್ಷಗಳಿಂದ ಅಧಿಕಾರಿಗಳು ಸುಳ್ಳು ಹೇಳಿ ವಿಳಂಬ ನೀತಿ ಅನುಸರಿಸಿದ್ದಾರೆ. ಈಗಲೂ ಕೆಲ ಸಿಬ್ಬಂದಿಗಳಿಂದ ರಸ್ತೆ ವಿಸ್ತರಣೆ ಕಾಮಗಾರಿಗೆ ಅಡೆತಡೆಯಾಗಿದೆ. ಇಂತಹ ಸಿಬ್ಬಂದಿಯನ್ನು ತಕ್ಷಣವೆ ವರ್ಗಾಯಿಸಿ ನ್ಯಾಯ ಒದಗಿಸಬೇಕು. ಸಂಬಂಧಿಸಿದ ಸಚಿವರು, ರಾಜ್ಯಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿಯಲಿ. ನಾವು ಯಾವುದೇ ಕಾರಣಕ್ಕೂ ಹೋರಾಟ ಕೈಬಿಡುವುದಿಲ್ಲ, 50ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದು, ಪ್ರತಿದಿನ ಒಂದೊಂದು ಸಂಘಟನೆ ಹೋರಾಟದಲ್ಲಿ ಪಾಲ್ಗೊಳ್ಳಲಿದೆ. ಯಾವುದೇ ಕಾರಣ ಹೋರಾಟದಿಂದ ಹಿಂದೆ ಸರಿಯಲ್ಲ, ರಸ್ತೆ ಕಾಮಗಾರಿಗೆ ಚಾಲನೆ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಮುಖ್ಯರಸ್ತೆಯಲ್ಲಿ ಮಣ್ಣು ಸುರಿಯಲಾಗಿದ್ದು, ಜನ-ವಾಹನಗಳ ಓಡಾಟಕ್ಕೆ ಅಡೆತಡೆಯಾಗಿದೆ. ಬಸ್‌ಗಳು ಪಟ್ಟಣದ ಒಳಗೆ ಬಾರದೆ, ಅಲ್ಲಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂತು.
ಎಸ್ಪಿ ಅಂಶುಕುಮಾರ, ವರ್ತಕರ ಸಂಘದ ಉಪಾಧ್ಯಕ್ಷ ಎ.ಆರ್. ನದಾಫ್, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಸದಸ್ಯರಾದ ಬಸವರಾಜ ಛತ್ರದ, ಗಂಗಣ್ಣ ಎಲಿ, ಸುರೇಶ ಚಲವಾದಿ, ಗಣೇಶ ಅಚಲಕರ, ಕಿರಣ ಎಂ. ಎಲ್. ಪ್ರಶಾಂತ ಯಾದವಾಡ, ರಾಜು ಮೋರಗೇರಿ, ವಿನಾಯಕ ಕಂಬಳಿ, ಪಾಂಡು ಸುತಾರ ಇತರರಿದ್ದರು.