

ಆರ್.ಕೃಷ್ಣ ಮೈಸೂರು
ನಗರವನ್ನು ಸುಂದರಗೊಳಿಸಲು ಮೈಸೂರು ರಾಜರು ನಿರ್ಮಿಸಿದ್ದ ಕೆರೆಗಳು ಕಲುಷಿತಗೊಳ್ಳುತ್ತಿದೆ.
ನಂಜನಗೂಡು ರಸ್ತೆಯಲ್ಲಿ ಹೆಬ್ಬಾಗಿಲಿನಂತಿರುವ ದಳವಾಯಿ ಕೆರೆ ಇನ್ನಷ್ಟು ಮಲಿನಗೊಂಡಿದ್ದು, ಯಾವುದೇ ಅಡೆತಡೆ ಇಲ್ಲದೆ ಮಲಿನ ನೀರು ಸೇರಿ ಗಿಡ-ಗಂಟಿಗಳು ಕೆರೆ ಆವರಿಸಿಕೊಂಡಿದೆ.
ಅರಸರ ಕಾಲದಲ್ಲಿ ಕೃಷಿ, ಕುಡಿಯುವ ನೀರಿನ ಅಗತ್ಯಕ್ಕಾಗಿ ಮೈಸೂರು ನಗರ ಸೇರಿ ತಮ್ಮ ವ್ಯಾಪ್ತಿಯ ಆಳ್ವಿಕೆಯಲ್ಲಿ 1,400 ಕೆರೆ-ಕಟ್ಟೆಗಳನ್ನು ನಿರ್ಮಿಸಲಾಯಿತು. ಇದರಿಂದ ಅಂತರ್ಜಲ ವೃದ್ಧಿಯ ಜತೆಗೆ ನಗರವನ್ನು ಸುಂದರಗೊಳಿಸಲಾಗಿತ್ತು. ಆದರೆ, ಆಧುನಿಕತೆ ಬೆಳೆದಂತೆ ಕೆರೆಗೆ ತ್ಯಾಜ್ಯ ನೀರು ಸೆರಿ ಕೆರೆ ಮಲಿನ ಆಗುವ ಜತೆಗೆ ಜಲಚರಗಳಿಗೂ ಅಪಾಯ ಉಂಟಾಗಿದೆ.
ನೀರು ಸಂಸ್ಕರಣೆ ಆಗದಿರುವುದೇ ಸಮಸ್ಯೆ:
ಮೈಸೂರು ನಗರದ ಕೊಳಚೆ ನೀರು ವಿದ್ಯಾರಣ್ಯಪುರಂ ಬಳಿ ಇರುವ ಸುಯೇಜ್ ಫಾರಂನಲ್ಲಿ ಸಂಸ್ಕರಣೆಗೊಂಡು ಬಳಿಕ ದಳವಾಯಿ ಕೆರೆಗೆ ಸೇರಬೇಕು. ಆದರೆ ನಗರದ ವಿವಿಧೆಡೆಯಿಂದ ಬರುತ್ತಿರುವ ಕೊಳಚೆ ನೀರನ್ನು ಸರಿಯಾಗಿ ಸಂಸ್ಕರಣೆ ಮಾಡಲಾಗುತ್ತಿಲ್ಲ. ಇದರಿಂದ ಕೊಳಚೆ ನೀರು ದಳವಾಯಿ ಕೆರೆಗೆ ಸೇರ್ಪಡೆ ಆಗುತ್ತಿದೆ.
ಬದಲಾದ ಅಭಿವೃದ್ಧಿಯ ಸ್ವರೂಪ, ಕಡಿಮೆ ಮಳೆಯಾದ ಸಂದರ್ಭದಲ್ಲಿ ದಳವಾಯಿ ಕೆರೆಗೆ ತ್ಯಾಜ್ಯ ನೀರೇ ಪೋಷಕವಾಗಿದೆ. ಆದರೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ದಳವಾಯಿ ಕೆರೆಯ ಒಡಲನ್ನು ತುಂಬಿಸುವ ತುರ್ತು ಅಗತ್ಯವಿದೆ.
ತ್ಯಾಜ್ಯ ನೀರು ನೇರವಾಗಿ ಸೇರುತ್ತಿರುವುದು ಇಲ್ಲಿನ ಜಲರಾಶಿಯನ್ನು ಮಾತ್ರ ಹಾಳು ಮಾಡುತ್ತಿಲ್ಲ. ಜೀವ ವೈವಿಧ್ಯತೆಗೂ ಕುತ್ತು ಉಂಟು ಮಾಡುತ್ತಿದೆ. ತ್ಯಾಜ್ಯ ನೀರು ನೇರವಾಗಿ ಕೆರೆಗೆ ಸೇರುತ್ತಿರುವುದರಿಂದ ಮಲಿನಕಾರಿ ಪದಾರ್ಥಗಳು ಕೆರೆಯನ್ನು ಸೇರುತ್ತಿವೆ. ನೈಟ್ರೊಜನ್ ಅಂಶ ತ್ಯಾಜ್ಯ ನೀರಿನಲ್ಲಿ ಹೆಚ್ಚಾಗಿ ಇರುವುದರಿಂದ ಇದು ಪಾಚಿ, ಕಳೆಗಿಡಗಳ ಬೆಳವಣಿಗೆಯನ್ನು ಉತ್ತೇಜಿಸುತ್ತಿದೆ. ಇದರಿಂದ ಪಾಚಿ, ಕಳೆಗಿಡಗಳ ಕೆರೆಯನ್ನು ಆವರಿಸಿ ಕೆರೆ ಮಲಿನ ಆಗುವ ಜತೆಗೆ ದುರ್ನಾತ ಬೀರಲು ಕಾರಣವಾಗುತ್ತಿದೆ.
ದಳವಾಯಿ ಕೆರೆಗೆ ನಿರಂತರವಾಗಿ ನೀರು ಸೇರ್ಪಡೆ ಆಗುತ್ತಿದೆ. ಕೆರೆಯಿಂದ ನೀರು ಜಮೀನಿಗೆ ಹರಿದು ಹೋಗುತ್ತಿರುವ ಕಾರಣ ಕೆರೆ ಹಾಳಾಗುವ ಪ್ರಮೇಯ ಇಲ್ಲ. ಇದರಿಂದ ಕೆರೆ ಜೀವಂತವಾಗಿರಲು ಸಾಧ್ಯವಾಗಿದೆ. ಆದರೆ, ತ್ಯಾಜ್ಯ ನೀರು ಕೆರೆ ಸೇರ್ಪಡೆ ಆಗದಂತೆ ಎಚ್ಚರ ವಹಿಸಬೇಕಿದೆ. ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಕೆರೆಗೆ ಹರಿಸುವ ವ್ಯವಸ್ಥೆ ಆಗಬೇಕಿದೆ ಎಂಬುದು ಪರಿಸರವಾದಿಗಳ ಅಭಿಪ್ರಾಯ.
ತ್ಯಾಜ್ಯ ನೀರಿನಲ್ಲಿ ನೈಟ್ರೊಜನ್ ಅಂಶ ಹೆಚ್ಚಿರುತ್ತದೆ. ಇದು ಪಾಚಿ, ಕಳೆಗಿಡಗಳಿಗೆ ಉತ್ತಮ ಗೊಬ್ಬರವಾಗಿ ಕೆಲಸ ಮಾಡುತ್ತದೆ. ಇದರಿಂದ ಬೇಕಾಬಿಟ್ಟಿ ಪಾಚಿ, ಕಳೆಗಿಡ ಬೆಳೆದು ಕೆರೆಯನ್ನು ಇಡೀ ಆವರಿಸಿಕೊಳ್ಳತೊಡಗುತ್ತದೆ. ಪಾಚಿ, ಕಳೆಗಿಡಗಳು ಕೆರೆಯನ್ನು ಆವರಿಸಿಕೊಳ್ಳುವ ಮೂಲಕ ಕೆರೆಯಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. ಇದರಿಂದ ಮೀನು, ಇತರ ಜಲಚರಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ಸಿಗದೆ ಸಾವಿಗೀಡಾಗುವ ಸ್ಥಿತಿ ಬರುತ್ತದೆ. ಈ ಹಿನ್ನೆಲೆಯಲ್ಲಿ ಕೆರೆಗೆ ಮಲಿನ ಪದಾರ್ಥಗಳು ಸೇರ್ಪಡೆ ಆಗದಂತೆ ಅಗತ್ಯ ಕ್ರಮ ವಹಿಸಬೇಕಿದೆ.
2016ರಲ್ಲಿ ದಳವಾಯಿ ಕೆರೆಯ ಪುನರುಜ್ಜಿವನಕ್ಕೆ ಆಸಕ್ತಿ ವಹಿಸಿರುವ ಕೆನಡಾ ಮೂಲದ ಇನಸಟಿಯೇಬಲ್ ಕ್ಲಿನ್ ಟೆಕ್ ಕಂಪನಿ ಅಂದಿನ ಜಿಲ್ಲಾಧಿಕಾರಿ ಡಿ.ರಂದೀಪ್ ಅವರ ಜತೆ ಚರ್ಚೆ ನಡೆಸಿತ್ತು. ಆದರೆ, ಈ ಸಂಬಂಧ ಯಾವುದೇ ಪ್ರಗತಿ ಇದುವರೆಗೆ ಆಗಿಲ್ಲ. ಅರಣ್ಯ ಇಲಾಖೆಯಿಂದ 2016ರ ನವೆಂಬರ್‌ನಲ್ಲ್ಲಿ ಮೈಸೂರು ಹಾಗೂ ನಂಜನಗೂಡು ತಾಲೂಕಿನಲ್ಲಿ ಕೆರೆಗಳ ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಲಾಯಿತು. ಅದರ ಪ್ರಕಾರ ಮೈಸೂರು ತಾಲೂಕಿನ ವ್ಯಾಪ್ತಿಗೆ ಬರುವ ದಳವಾಯಿ ಕೆರೆ ಹಳದಿ ಎಚ್ಚರಿಕೆಯಡಿ ವರ್ಗೀಕರಣ ಮಾಡಲಾಗಿದ್ದು, ಪೂರ್ವಸ್ಥಿತಿಗೆ ತರುವ, ಸಂರಕ್ಷಣಾ ಕ್ರಮದ ಅಗತ್ಯವನ್ನು ಹೊಂದಿದೆ. ದಳವಾಯಿ ಕೆರೆ ಇನ್ನಷ್ಟು ಮಲಿನಗೊಳ್ಳುವ ಮುನ್ನ ಕೆರೆಯನ್ನು ಅಭಿವೃದ್ಧಿ ಮಾಡಲು ಮುಂದಾಗಬೇಕಿದೆ ಎನ್ನುವ ಒತ್ತಾಯ ಕೇಳಿ ಬಂದಿದೆ.
ನೀರು ಸಂಸ್ಕರಣೆ ಕಾರ್ಯ ಪ್ರಗತಿಯಲ್ಲಿ
ಯುಜಿಡಿ ನೀರು ನೇರ ಕೆರೆಗೆ ಹೋಗುತ್ತಿರುವುದನ್ನು ತಡೆಯಲು ಬಡಾವಣೆಗಳ ಯುಜಿಡಿ ಸಂಪರ್ಕವನ್ನು ಸುಯೇಜ್ ಫಾರಂಗೆ ಸೇರಿಸುವ ಕೆಲಸ ಪ್ರಗತಿಯಲ್ಲಿದೆ. ಈ ಕಾರ್ಯ ಪೂರ್ಣಗೊಂಡ ಬಳಿಕ ದಳವಾಯಿ ಕೆರೆಗೆ ಸಂಸ್ಕರಿಸಲ್ಪಟ್ಟ ನೀರು ಮಾತ್ರ ಸೇರ್ಪಡೆಯಾಗಲಿದೆ.
ಡಾ.ಎನ್.ಎನ್.ಮಧು ನಗರಪಾಲಿಕೆ ಆಯುಕ್ತರು