ಕೆರೆ ಬರಿದಾಯ್ತು… ಬದುಕು ದುರ್ಬರವಾಯ್ತು…

HNL KERE
Published on

ಹಾನಗಲ್ಲ: ‘ಕರೆಯಂ ಕಟ್ಟಿಸು... ಬಾವಿಯಂ ಸವೆಸು...’

ವಿಜಯನಗರದ ಶಿಲಾಶಾಸನಗಳಲ್ಲಿ ಕಂಡುಬರುವ ಈ ಲೋಕ ಹಿತೋಕ್ತಿಯನ್ನು ಬಹುಶಃ ಹಾನಗಲ್ಲ ತಾಲೂಕಿನ ಹಿಂದಿನ ತಲೆಮಾರಿನವರಷ್ಟು ಬೇರೆ ಯಾರೂ ಅರ್ಥ ಮಾಡಿಕೊಂಡಿರಲಿಕ್ಕಿಲ್ಲ. ಏಕೆಂದರೆ, ಹಾನಗಲ್ಲ ತಾಲೂಕಿನಲ್ಲಿ ಒಂದಲ್ಲ, ಎರಡಲ್ಲ, ಹತ್ತಲ್ಲ, ನೂರಲ್ಲ.... ಬರೋಬ್ಬರಿ 920 ಕೆರೆಗಳಿವೆ!

ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಎರಡನೇ ತಾಲೂಕು ಹಾನಗಲ್ಲ. ಮೊದಲ ಸ್ಥಾನ ಪಕ್ಕದ ಸೊರಬಕ್ಕೆ ಇದೆ. ಮಲೆನಾಡು ಪ್ರದೇಶದಲ್ಲಿ ಇರುವ ಸೊರಬದಲ್ಲಿ ಅನೇಕ ಕೆರೆಗಳು ಸಹಜವಾಗಿ ರೂಪುಗೊಂಡವು ಅಥವಾ ಸುಲಭವಾಗಿ ನಿರ್ಮಾಣ ಮಾಡಿದವುಗಳು. ಆದರೆ, ಹಾನಗಲ್ಲ ತಾಲೂಕು ಅರೆಮಲೆನಾಡು ಪ್ರಾಂತವಾಗಿರುವುದರಿಂದ ಬೇಸಿಗೆ ಮತ್ತು ಬರಗಾಲವನ್ನು ಎದುರಿಸಲು ಯೋಜನಾಬದ್ಧವಾಗಿ ಇಲ್ಲಿಯ ಕೆರೆಗಳನ್ನು ನಿರ್ವಿುಸಲಾಗಿದೆ.

ಸದ್ಯ ದಾಖಲೆಯಲ್ಲಿರುವ 920ರಲ್ಲಿ ಹೆಚ್ಚಿನ ಕೆರೆಗಳನ್ನು ಕಟ್ಟಿದವರು ಇಂಜಿನಿಯರಿಂಗ್ ಪದವಿ ಪಡೆದವರಲ್ಲ; ಬದಲಾಗಿ, ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಸರಿಯಾಗಿ ಪೂರ್ತಿ ಮಾಡದ ಸಾಮಾನ್ಯ ರೈತರು ಮತ್ತು ಹಳ್ಳಿಗರು! ಪರಸ್ಪರ ಸಹಕಾರ ಮತ್ತು ಶ್ರಮದಿಂದಲೇ ಅವರು ಕೆರೆಗಳನ್ನು ನಿರ್ವಿುಸಿದರು. ಕೆಲವು ಕೆರೆಗಳನ್ನು ಊರ ಗೌಡರಂಥವರು, ದಾನಿಗಳು ಆಳು ಕಾಳು ಹಚ್ಚಿ ಕಟ್ಟಿಸಿದ್ದರು. ಹೀಗೆ ಹಿರಿಯರ ಅಮೋಘ ಕೊಡುಗೆಯಾಗಿರುವ ಈ ಕೆರೆಗಳು ನೂರಾರು ವರ್ಷ ಕಾಲ ಪ್ರತಿ ಮಳೆಗಾಲದಲ್ಲೂ ನೀರನ್ನು ಹಿಡಿದಿಟ್ಟುಕೊಂಡು, ಬೇಸಿಗೆಯಲ್ಲಿ ಜನಜೀವನ, ಕೃಷಿ ಕಾಯಕವನ್ನು ಅಕ್ಷರಶಃ ಪೋಷಿಸಿದವು.

ತಾಲೂಕಿನಲ್ಲಿ ಬಹುದೊಡ್ಡ ವಿಸ್ತೀರ್ಣವುಳ್ಳ ಕೆರೆಗಳಿವೆ. ಒಮ್ಮೆ ತುಂಬಿದರೆ ಮೂರು ಬೇಸಿಗೆಗಾಗುವಷ್ಟು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದವು!

ಜಲ ಸಂಗ್ರಹ, ಹೂಳೆತ್ತುವಿಕೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಮ್ಮ ಪೂರ್ವಜರು ಎರಡು ಕೆರೆಗಳನ್ನು ಅಕ್ಕಪಕ್ಕದಲ್ಲಿ ನಿರ್ವಿುಸಿದ ಉದಾಹರಣೆಗಳೂ ಇವೆ. ಒಂದು ಕೆರೆಯಲ್ಲಿ ನೀರು ಉಳಿಸಿಕೊಂಡು ಇನ್ನೊಂದು ಕೆರೆ ಖಾಲಿ ಮಾಡಿ ಹೂಳು ತೆಗೆಯುತ್ತಿದ್ದರು.

ಇಂಥ ಕೆರೆಯ ಕೆಳಭಾಗದಲ್ಲಿ ಮಾತ್ರ ಅಡಕೆ ತೋಟಗಳಿರುತ್ತಿದ್ದವು. ಕೊಳವೆ ಬಾವಿ ಗೊತ್ತಿಲ್ಲದ, ವಿದ್ಯುತ್ ಹಾಗೂ ಪಂಪ್​ಸೆಟ್ ಲಭ್ಯವಿಲ್ಲದ ಕಾಲದಲ್ಲೂ ತೋಟ-ಹೊಲಗಳು ಕಮರಿ ಹೋಗುತ್ತಿರಲಿಲ್ಲ. ಅಂತರ್ಜಲ ಮಟ್ಟ ಕುಸಿತ ಎನ್ನುವುದು ಗೊತ್ತೇ ಇಲ್ಲದ್ದರಿಂದ ಕೆಲವು ಕಡೆಗೆ ತೆರದ ಬಾವಿಗಳೂ ಬಳಕೆಯಲ್ಲಿದ್ದವು. ಆ ದಿನಗಳು ಈಗ ಇತಿಹಾಸದಂತಾಗಿವೆ. ಕೆಟ್ಟ ದಿನಗಳು ಬಂದಿವೆ. ಸರ್ಕಾರಗಳ ನಿರ್ಲಕ್ಷ್ಯ್ಕೆ ದೊಡ್ಡ ಬೆಲೆಯನ್ನೇ ತೆರುವಂತಾಗಿದೆ. ಜನರೂ ಒಂದಿಷ್ಟು ಉದಾಸೀನ ಮಾಡಿದ್ದು ಸುಳ್ಳಲ್ಲ.

ವರ್ತಮಾನದಲ್ಲಿ ಕಂಟಕ:

ಜಲಸಮೃದ್ಧಿ ಇದ್ದ ಹಾನಗಲ್ಲ ತಾಲೂಕಿನ ಕೆರೆಗಳೆಲ್ಲವೂ ಹಲವು ದಶಕಗಳಿಂದ ಹೂಳು ತುಂಬಿಕೊಂಡು ಕ್ರೀಡಾಂಗಣದಂತಾಗಿವೆ. ಮಳೆ ಸುರಿಯುವಾಗ ಜಲಾನಯನ ಪ್ರದೇಶದಿಂದ ನೀರಿನೊಟ್ಟಿಗೆ ಮಣ್ಣು ಕೂಡ ಕೊಚ್ಚಿಕೊಂಡು ಬರುವುದರಿಂದ ಕೆರೆಯಲ್ಲಿ ಹೂಳು ಸೇರುವುದು ಸಹಜ. ಈ ಕೆರೆಗಳನ್ನು ದಶಕಕ್ಕೆ ಒಮ್ಮೆಯಾದರೂ ಯೋಜನಾಬದ್ಧವಾಗಿ ಹೂಳು ತೆಗೆಯಬೇಕಿತ್ತು.

ಪ್ರಸಕ್ತ ವರ್ಷ ಹಾವೇರಿ ಜಿಲ್ಲೆಯ ಇತರ ತಾಲೂಕುಗಳಲ್ಲಿ ಆಶಾದಾಯಕ ಮಳೆಯಾದರೂ ಹಾನಗಲ್ಲ ತಾಲೂಕಿನ ಮೇಲೆ ವರುಣನ ಪೂರ್ಣ ಕೃಪೆ ಆಗಿಲ್ಲ.

ಕಳೆದ ಮುಂಗಾರಿನಲ್ಲಿಯೂ ಸಮೃದ್ಧ ಮಳೆಯಾಗದೇ ಈಗ ಯಾವೊಂದೂ ಕೆರೆಯಲ್ಲಿಯೂ ನೀರಿಲ್ಲದೇ ಭಣಗುಡುತ್ತಿವೆ. ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ, ಮಳೆಯಾದರೂ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಇಲ್ಲಿನ ಕೆರೆಗಳು ಕಳೆದುಕೊಂಡಿವೆ. ಇದು ಅತ್ಯಂತ ಶೋಚನೀಯ ಸಂಗತಿ.

ಸರ್ಕಾರೀಕರಣವೇ ಶಾಪವಾಯಿತು?

ಹಿರಿಯರು ಕಟ್ಟಿದ ಕೆರೆಗಳು ಕ್ರಮೇಣ ಸರ್ಕಾರದ ವಿವಿಧ ಇಲಾಖೆಗೆ ಸೇರಿದವು. ಕೆರೆಗಳ ನಿರ್ವಹಣೆ ಜವಾಬ್ದಾರಿಯೂ ಸಂಪೂರ್ಣವಾಗಿ ಸರ್ಕಾರದ್ದೇ ಆಯಿತು.

ಸರ್ಕಾರ ಇರುವುದು ಬೆಂಗಳೂರಿನಲ್ಲಿ, ಕೆರೆ ಇರುವುದು ಹಾನಗಲ್ಲ ಪಟ್ಟಣ ಮತ್ತು ತಾಲೂಕಿನ ಹಳ್ಳಿಗಳಲ್ಲಿ. ಕೆರೆಗಳ ನಿರ್ವಹಣೆ, ಕಾಮಗಾರಿ ಖರ್ಚಿಗಾಗಿ ಅನುಮತಿ, ಅನುದಾನ ಮಂಜೂರಿ ಎಲ್ಲಕ್ಕೂ ಇಲ್ಲಿಂದ ಸಲ್ಲಿಕೆಯಾದ ಪ್ರಸ್ತಾವನೆಗಳಿಗೆ ಬೆಂಗಳೂರಿನಲ್ಲಿಯ ಸರ್ಕಾರ ಕಾಲಕಾಲಕ್ಕೆ ಸ್ಪಂದಿಸಲಿಲ್ಲ. ಹೀಗಾಗಿ, ಅಧಿಕಾರಿಗಳನ್ನು ಕೇಳಿದರೆ ಬೆಂಗಳೂರಿನ ಕಡೆ ಬೆರಳು ತೋರಿಸತೊಡಗಿದರು. ಕ್ರಮೇಣ ಕೆರೆಗಳು ಮಣ್ಣಿನಿಂದ ತುಂಬಿಕೊಳ್ಳುತ್ತ, ಮುಳ್ಳು ಕಂಟಿಗಳು ಬೆಳೆಯುತ್ತ ಮೂಲ ರೂಪ ಕಳೆದುಕೊಂಡವು.

ಒಂದರ್ಥದಲ್ಲಿ ಸರ್ಕಾರೀಕರಣವೇ ಕೆರೆಗಳು ಮತ್ತು ಅವುಗಳನ್ನು ಅವಲಂಬಿಸಿದವರಿಗೆ ಪರೋಕ್ಷವಾಗಿ ಶಾಪವಾಯಿತು. ಪರಿಣಾಮವಾಗಿ, ಇಂದಿನ ಜಲಕ್ಷಾಮದಂಥ ದಯನೀಯ ಸ್ಥಿತಿ ಬಂದೊದಗಿದೆ.

ಇಲಾಖಾವಾರು ಕೆರೆಗಳು

ಸಣ್ಣ ನೀರಾವರಿ- 112

ಬೃಹತ್ ನೀರಾವರಿ- 92

ಗ್ರಾಮ ಪಂಚಾಯಿತಿ- 660

ಅರಣ್ಯ ಇಲಾಖೆ- 56

ಒಟ್ಟು - 920

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net